ಮುಂಬೈ: ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ. ಗಡಿ ದಾಟಿದ್ದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಬುಧವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿದ್ದು, ಮೊದಲ ಬಾರಿಗೆ 2,000 ರೂ. ದಾಟಿದೆ. ಆರ್‌ಐಎಲ್ ಷೇರು ದರ ಸಾರ್ವಕಾಲಿಕ ಗರಿಷ್ಠ ಪ್ರತಿ ಷೇರಿಗೆ 2,010 ರೂ. ಮಟ್ಟಕ್ಕೆ ತಲುಪಿದೆ.
ರಿಲಯನ್ಸ್ ಪ್ರಸ್ತುತ, ಬಿಎಸ್‌ಇಯಲ್ಲಿ 1,996 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಈ ಹಿಂದಿನ ವಹಿವಾಟು ಅಂತ್ಯದಿಂದ 24.15 ರೂ. ಅಥವಾ ಶೇ 1.22ರಷ್ಟು ಹೆಚ್ಚಳವಾಗಿದೆ. ಕಳೆದ ಮೂರು ತಿಂಗಳಲ್ಲಿ ಆರ್‌ಐಎಲ್ ಷೇರು ಬೆಲೆ ಶೇ 48ರಷ್ಟು ಏರಿಕೆಯಾಗಿದೆ.
ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್‌ಗಳಿಗೆ ವ್ಯಾಪಕ ಬಂಡವಾಳ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಇಷ್ಟೊಂದು ಏರಿಕೆ ಕಂಡುಬಂದಿದೆ.
ಜಿಯೋ ಪ್ಲಾಟ್‌ಫಾರ್ಮ್‌ಗಳು ಕಳೆದ ಮೂರು ತಿಂಗಳಲ್ಲಿ 1,52,056 ಕೋಟಿ ರೂ. ಹೂಡಿಕೆಯನ್ನು ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ಪಡೆದಿವೆ. ಜಿಯೋನಲ್ಲಿ ಗೂಗಲ್ ಇತ್ತೀಚಿಗೆ 33,737 ಕೋಟಿ ರೂ. ಹೂಡಿಕೆ ಮಾಡಿದೆ.