ಮುಂಬೈ: ಮುಂಬೈ ಷೇರುಪೇಟೆಯ ಗುರುವಾರದ ಬಿಎಸ್‌ಇಯ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್‌ಐಎಲ್) ಷೇರು ಬೆಲೆ 1,581.25 ರೂ.ಗೆ ತಲುಪಿದ ನಂತರ ಮಾರುಕಟ್ಟೆ ಬಂಡವಾಳ (ಎಂ-ಕ್ಯಾಪ್) ಮೌಲ್ಯವು 10 ಟ್ರಿಲಿಯನ್ ರೂ. ಏರಿಕೆಯಾಗಿದ್ದು, ಈ ಗುರಿ ಮುಟ್ಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಯಿಲ್ನಿಂದ ಟೆಲಿಕಾಂ ಸಮೂಹದವರೆಗೂ ಚಾಚಿಕೊಂಡಿರುವ ಷೇರುಪೇಟೆಯ ಆರ್‌ಐಎಲ್ ಎಂ-ಕ್ಯಾಪ್ ವಹಿವಾಟು ₹ 10,02,380 ಕೋಟಿಗೆ ಏರಿಕೆಯಾಗಿದೆ. ಕಳೆದ ಎಂಟು ವಹಿವಾಟಿನ ದಿನಗಳಲ್ಲಿ ಆರ್‌ಐಎಲ್ ಶೇ 8ರಷ್ಟು ಲಾಭ ಗಳಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಕಂಪನಿಯ ಟೆಲಿಕಾಂ ವಿಭಾಗವಾದ ರಿಲಯನ್ಸ್ ಜಿಯೋ ಮುಂದಿನ ಕೆಲವು ವಾರಗಳಲ್ಲಿ ಡೇಟಾ ದರ ಹೆಚ್ಚಿಸುವುದಾಗಿ ಘೋಷಿಸಿದ ಬಳಿಕ ಬಿಎಸ್ಇನ ಎಸ್&ಪಿ ಶೇ 1ರಷ್ಟು ಏರಿಕೆಯಾಗಿದೆ.