ಮುಂಬೈ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಡಳಿತ ಸುಧಾರಣೆ ಭಾಗವಾಗಿ ಆರ್‌ಬಿಐ, ಬ್ಯಾಂಕ್ಗಳ ಸಿಇಒಗಳಿಗೆ ಮತ್ತು ಪೂರ್ಣ ಪ್ರಮಾಣದ ನಿರ್ದೇಶಕರಿಗೆ 70 ವರ್ಷ ಹಾಗೂ ಪ್ರವರ್ತಕ ಗ್ರೂಪ್ನವರಿಗೆ ಗರಿಷ್ಠ 10 ವರ್ಷಗಳ ಅವಧಿ ಪ್ರಸ್ತಾಪಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಬಿಡುಗಡೆ ಮಾಡಿದ ಚರ್ಚಾ ಪೇಪರ್ನಲ್ಲಿ ಪ್ರವರ್ತಕ ಗುಂಪಿಗೆ ಸೇರಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒ) ಮತ್ತು ಸಂಪೂರ್ಣ ಸಮಯದ ನಿರ್ದೇಶಕರು (ಡಬ್ಲ್ಯುಟಿಡಿ) ಹತ್ತು ವರ್ಷಗಳ ಬಳಿಕ ವ್ಯವಸ್ಥಾಪಕ ನಾಯಕತ್ವವನ್ನು ವೃತ್ತಿಪರರಿಗೆ ವರ್ಗಾಯಿಸಬೇಕು ಎಂದು ಹೇಳಿದೆ.
ಬ್ಯಾಂಕ್ಗಳ ಸಿಇಒ / ಡಬ್ಲ್ಯುಟಿಡಿಗಳಿಗೆ ಹೆಚ್ಚಿನ ವಯಸ್ಸಿನ ಮಿತಿ 70 ವರ್ಷ ಇರಲಿದೆ. ಇದನ್ನು ಮೀರಿ ಯಾರೂ ಪೋಸ್ಟ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. 70 ವರ್ಷಗಳ ಮಿತಿಯೊಳಗೆ ಮಂಡಳಿಯು ಸಿಇಒ / ಡಬ್ಲ್ಯುಟಿಡಿಗಳಿಗೆ ಸೂಚಿಸಬಹುದು ಎಂದು ಚರ್ಚಾ ಪೇಪರ್ನಲ್ಲಿ ಸೂಚಿಸಿದ್ದು, 2020ರ ಜುಲೈ 15ರೊಳಗೆ ಆರ್‌ಬಿಐ ವಿವಿಧ ಷೇರ್ ಹೋಲ್ಡರ್ಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.
ಉತ್ತಮ ಆಡಳಿತ ಅಭ್ಯಾಸದ ಸಂಸ್ಕೃತಿಯನ್ನು ಪರಿಚಯಿಸಲು ಮತ್ತು ನಿರ್ವಹಣೆಯಿಂದ ಮಾಲೀಕತ್ವವನ್ನು ಬೇರ್ಪಡಿಸುವ ತತ್ವವನ್ನು ಅಳವಡಿಸಿಕೊಳ್ಳಲು ಡಬ್ಲ್ಯುಟಿಡಿ ಮತ್ತು ಸಿಇಒಗಳ ಅಧಿಕಾರಾವಧಿಯನ್ನು ಮಿತಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ.