ಮುಂಬೈ:ಮಹತ್ವದ ಬೆಳವಣಿಗೆಯಲ್ಲಿ ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಕಾರ್ಯಾಚರಣೆಯ ನಿಬಂಧನೆಗಳನ್ನು ವಿಧಿಸಿದೆ.
ಇಂನಿಂದ ಮುಂದಿನ ಆರು ತಿಂಗಳ ಕಾಲ ಈ ನಿರ್ಬಂಧಗಳು ಜಾರಿಯಲ್ಲಿರಲಿದ್ದು, ಪಿಎಂಸಿ ಬ್ಯಾಂಕ್ ಗ್ರಾಹಕರು ಇನ್ಮುಂದೆ 1 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಿಕೊಳ್ಳುವಂತಿಲ್ಲ. ಈ ನಿರ್ಬಂಧನೆಗಳ ನಡುವೆ ಸಹಕಾರಿ ಬ್ಯಾಂಕ್ ತನ್ನ ದೈನಂದಿನ ವ್ಯವಹಾರಗಳನ್ನು ಮುಂದುವರಿಸಬೇಕು ಎಂದು ತಿಳಿಸಿದೆ.
ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದೆ. ಈ ಶಾಖೆಗಳಲ್ಲಿ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ನೀಡಲಾಗಿಲ್ಲ. ಈ ಸಹಕಾರಿ ಬ್ಯಾಂಕ್ ಹಣವನ್ನು ಎರವಲು ಹಾಗೂ ಹೊಸ ಠೇವಣಿ ಸಹ ಪಡೆಯುವಂತಿಲ್ಲ. ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದೆ.
ಆರ್ಬಿಐ ನಿರ್ದೇಶನದ ಪ್ರತಿಯನ್ನು ಎಲ್ಲ ಖಾತೆದಾರರಿಗೆ ರವಾನಿಸಬೇಕು ಮತ್ತು ಅದನ್ನು ಬ್ಯಾಂಕ್ ಕಚೇರಿಗಳು ಬ್ಯಾಂಕ್ ವೆಬ್ಸೈಟ್ನಲ್ಲಿ ಪ್ರದರ್ಶಿಸಬೇಕು ಎಂದಿದೆ. 2019ರ ಮಾರ್ಚ್‌ವರೆಗೆ ಪಿಎಂಸಿ ಬ್ಯಾಂಕ್ 11,617 ಕೋಟಿ ರೂ. ಠೇವಣಿ ಹೊಂದಿದ್ದು, 8,383 ಕೋಟಿ ರೂ. ಮುಂಗಡ ಹಣವಿದೆ. ಶೇ 2.19ರಷ್ಟು ಎನ್ಪಿಎ (ಅನುತ್ಪಾದಕ ಆಸ್ತಿ) ಸಹ ಹೊಂದಿದೆ.