ನವದೆಹಲಿ: ಸಣ್ಣ ಉದ್ಯಮಿಗಳು ಸಾಲಕ್ಕೆ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಸುಮಾರು 40,000 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆಯಂತೆ. ಕಳೆದ ಮೂರು ವರ್ಷಗಳಲ್ಲಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡುವ ಯೋಜನೆ ಅಡಿ ಈ ಸಾಲ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾದ್ ಹೇಳಿದ್ದಾರೆ.
ರಾಜ್ಯಸಭೆಗೆ ಈ ಮಾಹಿತಿ ನೀಡಿರುವ ಅವರು, ಈ ಮೂರು ವರ್ಷಗಳಲ್ಲಿ ಸಲ್ಲಿಕೆಯಾಗಿರುವ 2.01 ಲಕ್ಷ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ 39,580 ಕೋಟಿ ರೂ.ಗಳ ಸಾಲ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಚಿಲ್ಲರೆ ಸಾಲ ವಿಭಾಗದಲ್ಲಿ 1,689 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, 17,800 ಜನರಿಗೆ ಈ ಸಾಲವನ್ನು ಸರ್ಕಾರದ ಪೋರ್ಟಲ್ ಮೂಲಕ ವಿತರಿಸಲಾಗಿದೆ ಎಂದು ಕರಾದ್ ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಿದ ಕೇವಲ 59 ನಿಮಿಷಗಳಲ್ಲೇ ಸಾಲ:ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸೆಪ್ಟೆಂಬರ್ 2018ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕೃತ ಪೋರ್ಟಲ್ psbloansin59minutes.com ಅನ್ನು ಆರಂಭಿಸಿದ್ದರು. ಈ ಮೂಲಕ ಅರ್ಜಿ ಸಲ್ಲಿಸಿದ ಒಂದು ಗಂಟೆಗಳ ಒಳಗೆ ಸಾಲ ನೀಡುವ ಕೆಲಸ ಮಾಡಲಾಗುತ್ತಿದೆ.
ಪೋರ್ಟಲ್ ಮೂಲಕ ಪಡೆದ ಸಾಲದ ಅರ್ಜಿಗಳ ಮೇಲೆ ಎಷ್ಟು ಸಾಲ ನೀಡಬೇಕು ಎಂಬ ಬಗ್ಗೆ ಬ್ಯಾಂಕ್ಗಳು ನಿರ್ಧರಿಸುತ್ತವೆ ಮತ್ತು ಮೇಲ್ವಿಚಾರಣೆ ಮಾಡುತ್ತವೆ. ಇದೇ ವೇಳೆ ಸಾಲದಾತ ಬ್ಯಾಂಕ್ಗಳು ಅನುತ್ಪಾದಕ ಆಸ್ತಿಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿವೆ ಎಂದು ರಾಜ್ಯಸಭೆಗೆ ಸಚಿವರು ಮಾಹಿತಿ ನೀಡಿದರು.