ನವದೆಹಲಿ:ಪ್ರೇಮಿಗಳ ದಿನದಂದು ತನ್ನ ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಹಜ. ಆದರೆ, ಇಲ್ಲಿಂದು ತ್ರಿಕೋನ ಪ್ರೇಮ ಕಹಾನಿ ಯುವ ಜೋಡಿಗಳ ಬದಲಿಗೆ ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಗಳ ನಡುವೆ ಉಂಟಾಗಿದೆ.
ಪ್ರೇಮಿಗಳ ದಿನದಂದು ದೆಹಲಿ ವಿಮಾನ ನಿಲ್ದಾಣ ಮತ್ತು ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳ ನಡುವೆ ಪ್ರೇಮಾಂಕುರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳ ನಡುವಿನ ಸಂಭಾಷಣೆ ನೆಟ್ಟಿಗರ ಮನಸ್ಸಿಗೆ ಕಿಚ್ಚು ಹಾಯಿಸಿವೆ.
ಶುಕ್ರವಾರ ಬೆಳ್ಳಂಬೆಳಗ್ಗೆ ಒಂದು ಟ್ವೀಟ್‌ನಲ್ಲಿ ದೆಹಲಿ ವಿಮಾನ ನಿಲ್ದಾಣವು ಇಂಡಿಗೋ ಸಂಸ್ಥೆಗೆ ಭಾವನಾತ್ಮಕ ಪೋಸ್ಟ್ ಮಾಡಿ, 'ಹೇ ಇಂಡಿಗೋ 6ಇ, ನನ್ನ ರನ್ವೇಯಿಂದ ನೀನು ಎಂದಿಗೂ ಓಡಿಹೋಗುವುದಿಲ್ಲ ಎಂದು ನನಗೆ ಭರವಸೆ ಕೊಡು. ದೆಹಲಿ ಲವ್ಸ್ ಯು ವ್ಯಾಲೆಂಟೆನ್ಸ್ ಡೇ-2020' ಕೋರಿಕೊಂಡಿದೆ.
ಏರೋನಾಟಿಕಲ್ ಹಾಸ್ಯದೊಂದಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರತ್ಯುತ್ತರ ಕೊಟ್ಟ ಇಂಡಿಗೋ, 'ಡಾರ್ಲಿಂಗ್ ದೆಹಲಿ ಏರ್ಪೋರ್ಟ್, ನಿನ್ನ ಒಲವು ನನ್ನನ್ನು ಯಾವಾಗಲೂ ಸರಿಯಾದ ಸಮಯಕ್ಕೆ ಕರೆತರುತ್ತದೆ. ದೆಹಲಿ ಲವ್ಸ್ ಯು ವ್ಯಾಲೆಂಟೆನ್ಸ್ ಡೇ2020' ಎಂದು ಲಲನೆಯಿಂದ ಭರವಸೆ ಕೊಟ್ಟಿದೆ.