ನವದೆಹಲಿ:ತೀವ್ರ ಹಣಕಾಸಿನ ಮುಗ್ಗಟ್ಟು ಎದುರುಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಜತೆಗೆ ಕಂಪನಿಯಲ್ಲಿ ಯಾವುದೇ ಉದ್ಯೋಗ ಕಡಿತದ ಪ್ರಸ್ತಾಪ ಇಲ್ಲ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಭರವಸೆ ನೀಡಿದ್ದಾರೆ.
ಸಂಕಷ್ಟದ ಸುಳಿಯಿಂದ ಮೇಲೆತ್ತಲು ಬಿಎಸ್ಎನ್ಎಲ್ ಆಡಳಿತ ಮಂಡಳಿ ಸಮಿತಿಯ ಕೆಲವು ಶಿಫಾರಸುಗಳನ್ನು ಸರ್ಕಾರದ ಮುಂದಿರಿಸಿತ್ತು. ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಅನ್ನು ಆರೋಗ್ಯಕರ ರೀತಿಯಲ್ಲಿ ಪುನಶ್ಚೇತನಕ್ಕೆ ಸರ್ಕಾರ ನಿರ್ಧರಿಸಿ ಟೆಲಿಕಾಂ ಇಲಾಖೆ, ಹಣಕಾಸು ಸಚಿವಾಲಯ ಮತ್ತು ನಿತಿ ಆಯೋಗದ ಪ್ರತಿನಿಧಿಗಳ ಸಭೆ ನಡೆಸಿವೆ.
ಸಭೆಯ ಬಳಿಕ ಪ್ರಮುಖ ಮೂರು ಅಂಶಗಳಿಗೆ ಪ್ರಧಾನಿ ಕಚೇರಿ ತಾತ್ವಿಕ ಒಪ್ಪಂದ ನೀಡಿದ್ದು, 4ಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಆದೇಶಿಸಿದೆ. ಸ್ವಯಂಪ್ರೇರಿತ ನಿವೃತ್ತಿ ಯೋಜನೆ ಮತ್ತು ತತಕ್ಷಣ ಹಣಕಾಸು ಅನುದಾನದ ಸಹಾಯ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯ 54,000 ಉದ್ಯೋಗ ಕಡಿತ ಮಾಡುವ ಸಾಧ್ಯತೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶ್ರೀವಾಸ್ತವ ಟ್ವೀಟ್ ಮಾಡಿದ್ದು, ವರದಿಗಳನ್ನು ನಿರಾಕರಿಸಿದ್ದಾರೆ. ನೌಕರರ ಹಿತ ಕಾಯುವುದಾಗಿ ಆಶ್ವಾಸನೆ ನೀಡಿದ್ದು, ನಿವೃತ್ತಿಯ ವಯಸ್ಸನ್ನು ಇಳಿಸುವ ಉದ್ದೇಶ ಕೂಡ ಇಲ್ಲ. ಆಸಕ್ತ ಉದ್ಯೋಗಿಗಳಿಗೆ ಆಕರ್ಷಕ ವಿಆರ್‌ಎಸ್ (ಸ್ವಯಂ ಪ್ರೇರಿತ ನಿವೃತ್ತಿ ಯೋಜನೆ) ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
50 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್ ಪ್ಯಾಕೇಜ್ ನೀಡಲು ₹ 6,353 ಕೋಟಿ ವಿನಿಯೋಗಿಸಲು ಉದ್ದೇಶಿಸಿದೆ. ಬಿಎಸ್ಎನ್ಎಲ್ ಒಟ್ಟು 1.76 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಆದಾಯದಲ್ಲಿ ಶೇ55ರಿಂದ 60ರಷ್ಟು ವೇತನ ವೇತನ ಖರ್ಚಿಗೆ ತಗಲುತ್ತದೆ.