ತಿರುವನಂತಪುರ:ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೇರಳದ ಚರಂಡಿ, ಕಿರು ಸೇತುವೆ, ಹಳ್ಳದ ದಂಡೆಯಲ್ಲಿ ರಾಶಿ-ರಾಶಿಯಾಗಿ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ಪ್ರವಾಹದಂತೆ ಕಾಣುತ್ತಿವೆ. ಇದನ್ನು ನೆಟ್ಟಿಗರು 'ಪ್ರಕೃತಿ ಹಿಂದುರಿಗಿಸಿರುವ ಉಡುಗರೆ' ಎಂದು ವ್ಯಂಗ್ಯವಾಡಿ ಟ್ರೋಲ್ ಮಾಡುತ್ತಿದ್ದಾರೆ.
ಕಳೆದ ವರ್ಷ ಕೂಡ ಪ್ರವಾಹ ಬಂದಾಗ ಕೇರಳದ ರಸ್ತೆಯ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪ್ಲಾಸ್ಟಿಕ್ ವ್ಯಾಮೋಹವನ್ನು ಅಣಕಿಸುವಂತಿತ್ತು. ಈಗ ಮತ್ತೆ ಅಂತಹ ಘಟನೆ ಮರುಕಳಿಸಿದೆ. ನದಿ, ಹಳ್ಳ, ಕಾಲುವೆಗಳ ದಡದ ಎಡ, ಬಲ ಮತ್ತು ಮಧ್ಯದಲ್ಲಿ ಪ್ಲಾಸ್ಟಿಕ್ ನೀರ ಮೇಲೆ ತೇಲಾಡುತ್ತಿದೆ. ಬಳಸಿದ ಪ್ಲಾಸ್ಟಿಕ್ಅನ್ನು ಎಲ್ಲಂದರಲ್ಲಿ ಬಿಸಾಡಿ ಭೂಮಿಯ ಬಗ್ಗೆ ನಾವು ಕಾಳಜಿ ವಹಿಸುತ್ತಿಲ್ಲ ಎಂದು ಟೀಕೆಗಳು ಟ್ವಿಟರ್ನಲ್ಲಿ ಕೇಳಿಬರುತ್ತಿವೆ.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೇರಳದ ಪಾಲಕ್ಕಾಡ್ ಚಿತ್ರವನ್ನು ಹಂಚಿಕೊಂಡು, "ಹೋಮ್ ಡೆಲಿವರಿ!! ಕೇರಳದ ಪಲಕ್ಕಾಡ್ನಿಂದ ಬಂದಿದೆ ನೋಡಿ. ನಾವು ಏನು ಉಡುಗರೆಯಾಗಿ ನೀಡಿದ್ದೇವೋ ಅದನ್ನು ನೀರು ಮರಳಿ ನಮಗೆ ಹಿಂದಿರುಗಿಸುತ್ತಿದೆ. ನಾವು ಪ್ಲಾಸ್ಟಿಕ್ಅನ್ನು ಉಡುಗೊರೆಯಾಗಿ ನೀಡಿದ್ದೇವೆ. ಪ್ಲಾಸ್ಟಿಕ್ ಎಂದೆಂದಿಗೂ ಇರಲಿದೆ'' ಎಂದು ಅಣಕವಾಡಿದ್ದಾರೆ.
'ಪ್ರಕೃತಿ ತಾಯಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದಾಗ ತಾಯಿಯ ತಾಳ್ಮೆಗೆ ಸಹ ಒಂದು ಮಿತಿ ಇದೆ' ಎಂದು ಐಶ್ವರ್ಯ ಪಲಗುಮ್ಮಿ ಟ್ವೀಟ್ ಮಾಡಿದ್ದಾರೆ. ಇದೇ ರೀತಿ ಟ್ವಿಟರ್ನಲ್ಲಿ ಟೀಕೆಯ ಸಂದೇಶಗಳು ಹರಿದಾಡುತ್ತಿವೆ. ಪ್ರವಾಹದಿಂದಾಗಿ ರಸ್ತೆಗಳು ಕೊಚ್ಚಿಹೋಗಿದ್ದರೂ ತ್ಯಾಜ್ಯವನ್ನು ನದಿಗೆ ಸುರಿಯುತ್ತಿರುವುದು ನಿಜಕ್ಕೂ ಅಕ್ಷಮ್ಯ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.