ನವದೆಹಲಿ:ಕೋವಿಡ್ 19 ಬಿಕ್ಕಟ್ಟು ಎದುರಿಸಲು ಕೇಂದ್ರದ ಪಿಎಂ- ಕೇರ್ಸ್ ನಿಧಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್ ಪೇಟಿಎಂ ತನ್ನ ಬಳಕೆದಾರರ ಮೂಲಕ 100 ಕೋಟಿ ರೂ. ಸಂಗ್ರಹಿಸಿದೆ.
ಇದಕ್ಕೂ ಮೊದಲು ಪೇಟಿಎಂ ಪಿಎಂ ಕೇರ್ಸ್ ನಿಧಿಗೆ 500 ಕೋಟಿ ರೂ. ಸಂಗ್ರಹಿಸಿ ಕೊಡುವುದಾಗಿ ಘೋಷಿಸಿತ್ತು. ಬಳಕೆದಾರರು ವಾಲೆಟ್, ಯುಪಿಐ ಅಥವಾ ಪೇಟಿಎಂ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿ ವಹಿವಾಟು ನಡೆಸಿದ ಪ್ರತಿ ಪಾವತಿಗಾಗಿ 10 ರೂ. ಹೆಚ್ಚುವರಿ ಮೊತ್ತು ಪಿಎಂ ಕೇರ್ಸ್ಗೆ ವರ್ಗಾಯಿಸುತ್ತಿದೆ.
ಕೇವಲ 10 ದಿನಗಳಲ್ಲಿ ಪೇಟಿಎಂ ಅಪ್ಲಿಕೇಷನ್ ದೇಣಿಗೆ ಸಂಗ್ರಹವು 100 ಕೋಟಿ ರೂ. ದಾಟಿದೆ. ಈ ಮೂಲಕ ಪೇಟಿಎಂನ ಫಂಡ್ ಸಂಗ್ರಹ ಉದ್ದೇಶವು ಇನ್ನಷ್ಟು ಪ್ರಬಲವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ಉದ್ಯೋಗಿಗಳು ಸಹ ಒಗ್ಗೂಡಿ ತಮ್ಮ ಸಂಬಳದ ಒಂದಿಷ್ಟು ಪಾಲನ್ನು ಈ ನಿಧಿಗೆ ನೀಡಿದ್ದಾರೆ. ಉದಾತ್ತ ಉದ್ದೇಶಕ್ಕಾಗಿ 1,200ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ 15 ದಿನಗಳ, ಒಂದು ತಿಂಗಳು, ಎರಡು ತಿಂಗಳ ಮತ್ತು ಮೂರು ತಿಂಗಳ ಸಂಬಳ ನೀಡಿದ್ದಾರೆ ಎಂದು ಹೇಳಿದೆ.
ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶದ ಪ್ರತಿಯೊಬ್ಬ ನಾಗರಿಕರೂ ಒಗ್ಗೂಡುವ ಅಗತ್ಯವಿದೆ. ಈ ಕಾರಣಕ್ಕಾಗಿ ಭಾರತೀಯರನ್ನು ಪೂರ್ಣ ಹೃದಯದಿಂದ ಕೊಡುಗೆ ನೀಡುವಂತೆ ನಾವು ಒತ್ತಾಯಿಸುತ್ತೇವೆ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷ ಅಮಿತ್ ವೀರ್ ಮನವಿ ಮಾಡಿದರು.