ನವದೆಹಲಿ:ಜಿಯೋ ಚಂದಾದಾರರು ತನ್ನ ನೆಟ್‌ವರ್ಕ್ ವ್ಯಾಪ್ತಿಯ ಇತರ ಗ್ರಾಹಕರ ಖಾತೆಯ ಮೊಬೈಲ್ ನಂಬರ್ಗೆ ಆ್ಯಪ್ ಮೂಲಕ ರೀಚಾರ್ಜ್ ಮಾಡಿದರೆ ಶೇ 4ರಷ್ಟು ಕಮಿಷನ್ ಗಳಿಸುವ ಹೊಸ ಸೌಲಭ್ಯವನ್ನು ರಿಲಯನ್ಸ್ ಜಿಯೋ ಪರಿಚಯಿಸಿದೆ.
ಲಾಕ್‌ಡೌನ್‌ನಿಂದಾಗಿ ಅನೇಕ ಜನರು ತಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ. ಟೆಲಿಕಾಂ ನಿಯಂತ್ರಕ ಟ್ರಾಯ್ ಈ ಅವಧಿಯಲ್ಲಿ ಎಲ್ಲಾ ಪ್ರಿಪೇಯ್ಡ್ ಸಂಪರ್ಕಗಳ ವಾಯ್ದೆಯನ್ನು ವಿಸ್ತರಿಸುವಂತೆ ಟಲಿಕಾಂ ಆಪರೇಟರ್ ಸೇವಾ ಪೂರೈಕೆದಾರರನ್ನು ಒತ್ತಾಯಿಸುತ್ತಿದೆ.
ರಿಲಯನ್ಸ್ ಜಿಯೋ ಗೂಗಲ್ ಪ್ಲೇ ಸ್ಟೋರ್ನಲ್ಲಿ ಜಿಯೋಪೋಸ್ ಲೈಟ್ ಅಪ್ಲಿಕೇಷನ್ ಒಂದನ್ನು ಪರಿಚಯಿಸಿದೆ. ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿಕೊಂಡು ಜಿಯೋ ನೆಟ್‌ವರ್ಕ್‌ನಲ್ಲಿ ಯಾವುದೇ ಚಂದಾದಾರರ ಫೋನ್ ನಂಬರ್ಗೆ ರೀಚಾರ್ಜ್ ಮಾಡಬಹುದು.
ಈ ಸೇವೆಗೆ 1,000 ರೂ. ಪ್ರವೇಶ ಶುಲ್ಕವಿದೆ. ಆದರೆ ಕಂಪನಿಯು ಆರಂಭಿಕ ಪರಿಚಯ ಕೊಡುಗೆಯಾಗಿ ಶುಲ್ಕವನ್ನು ಬಿಟ್ಟುಕೊಟ್ಟಿದೆ. ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವ ಜಿಯೋ ಗ್ರಾಹಕರು ಮೊದಲ ಬಾರಿಗೆ ಕನಿಷ್ಠ 1,000 ರೂ. ಠೇವಣಿಯಂತೆ ಇರಿಸಬೇಕಾಗುತ್ತದೆ. ಬಳಿಕ ಕನಿಷ್ಠ ರೀಚಾರ್ಜ್ 200 ರೂ. ಇರಲಿದೆ ಎಂದು ಪಿಟಿಐಗೆ ಮೂಲವೊಂದು ತಿಳಿಸಿದೆ.