ನವದೆಹಲಿ: ಹೊಸದಾಗಿ ಬಿಡುಗಡೆಯಾದ ಕಾಂಪ್ಯಾಕ್ಟ್ ಎಸ್‌ಯುವಿ ಮ್ಯಾಗ್ನೈಟ್‌ಗೆ ವ್ಯಾಪಕ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಮತ್ತು ಮಾರಾಟವನ್ನು ಬಲಪಡಿಸಲು ತನ್ನ ವ್ಯಾಪಾರಿ ಪಾಲುದಾರರ ಜತೆಗೂಡಿ ಭಾರತದಲ್ಲಿ 1,500 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಜಪಾನಿನ ಆಟೋ ದೈತ್ಯ ನಿಸ್ಸಾನ್ ಘೋಷಿಸಿದೆ.
ಕಂಪನಿಯು ತನ್ನ ಚೆನ್ನೈ ಘಟಕದಲ್ಲಿ ಮೂರನೇ ಶಿಫ್ಟ್ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಫೆಬ್ರವರಿ ವೇಳೆಗೆ ಮ್ಯಾಗ್ನೈಟ್ ಉತ್ಪಾದನೆಯನ್ನು ತಿಂಗಳಿಗೆ ಸುಮಾರು 3,500-4,000 ಯುನಿಟ್ಗಳಿಗೆ ಏರಿಕೆ ಮಾಡಲಿದೆ. ಈಗ ತಿಂಗಳಿಗೆ ಸುಮಾರು 2,500 ಯುನಿಟ್ಗಳನ್ನು ತಯಾರಿಸುತ್ತಿದೆ.
ಇದನ್ನೂ ಓದಿ: ರಾಮ ಭಕ್ತರಿಗೆ ಮಹಾಮಂದಿರ ಇನ್ನಷ್ಟು ಹತ್ತಿರ: ಅಯೋಧ್ಯೆಯ ಸರಯೂ ನದಿಯಲ್ಲಿ ಸೀ ಪ್ಲೇನ್!
ಡಿಸೆಂಬರ್ 2ರಂದು ಮ್ಯಾಗ್ನೈಟ್ ಪ್ರಾರಂಭಿಸಿದಾಗಿನಿಂದ ನಿಸ್ಸಾನ್ ಮೋಟಾರ್ ಇಂಡಿಯಾ ಸುಮಾರು 32,800 ಬುಕ್ಕಿಂಗ್ ಪಡೆದಿದೆ. ಗ್ರಾಹಕರು ಕಾಯುವ ಅವಧಿಯನ್ನು ಹಲವು ತಿಂಗಳ ತನಕ ವಿಸ್ತರಣೆ ಆಗಿದೆ. ಇದನ್ನು ತಗ್ಗಿಸುವ ಉದ್ದೇಶದಿಂದ ಉತ್ಪಾದನೆ ಸಾಮರ್ಥ್ಯ ವೃದ್ಧಿಸಲು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಘೋಷಿಸಿದೆ.
ಗ್ರಾಹಕರು ತಮ್ಮ ಮ್ಯಾಗ್ನೈಟ್ ಕಾರುಗಳ ಪ್ರಯಾಣ ಆನಂದಿಸಬೇಕೆಂದು ನಾವು ಬಯಸುತ್ತೇವೆ. ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಚೆನ್ನೈ ಘಟಕದಲ್ಲಿ ಮೂರನೇ ಶಿಫ್ಟ್ ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಇಲ್ಲಿ ಸುಮಾರು 1,000ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.