ಮುಂಬೈ: ರಿಲಯನ್ಸ್ ಜಿಯೋ ಪರಿಚಯದಿಂದಾಗಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಆರ್ಐಎಲ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದರು.
ಫ್ಯೂಚರ್ ಡಿಕೋಡೆಡ್ ಸಿಇಒ ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಡೇಟಾ ಶುಲ್ಕವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಜಿಯೋ ಸಹಾಯ ಮಾಡಿದೆ. ಜಿಯೋ ಪೂರ್ವದ ದಿನಗಳಲ್ಲಿ ಪ್ರತಿ ಜಿಬಿಗೆ 300-500 ರೂ.ಗಳಷ್ಟು ಇದ್ದ ಡೇಟಾ ವೆಚ್ಚವನ್ನು ಈಗ 12-14 ರೂ.ಗೆ ಇಳಿಸಲಾಗಿದೆ ಎಂದರು.
ಡೇಟಾ ಬಳಕೆ ಹೆಚ್ಚಾಗಿದೆ ಮತ್ತು ಡಿಜಿಟಲ್ ಇಂಡಿಯಾ ಈಗ ಜನರ ಮೂಮೆಂಟ್ ಆಗಿದೆ. ಇದುವೇ ದರ ಇಳಿಕೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ದೇಶಿಯ ಟೆಲಿಕಾಂ ಉದ್ಯಮವನ್ನು ದೃಷ್ಟಿಯಲ್ಲಿರಿಸಿಕೊಂಡು ಡಿಜಿಟಲ್ ಇಂಡಿಯಾ ಕುರಿತು ತಮ್ಮ ದೂರದೃಷ್ಟಿ ಬಿಚ್ಚಿಟ್ಟರು ಎಂದರು.
ಬಳಿಕ ಸತ್ಯ ನಾದೆಲ್ಲಾ ಮಾತನಾಡಿ, ಭಾರತದ ಉದ್ದಿಮೆ ಮುಖಂಡರು ಅಂತರ್ಗತವಾಗಿರುವ ತಂತ್ರಜ್ಞಾನ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ಭಾರತೀಯ ಸಿಇಒಗಳು ತಮ್ಮದೇ ಆದ ತಾಂತ್ರಿಕ ಸಾಮರ್ಥ್ಯವನ್ನು ಕೂಡ ವೃದ್ಧಿಸಿಕೊಳ್ಳಬೇಕಿದೆ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಂತೆ ನೋಡಿಕೊಳ್ಳಬೇಕು. ಭಾರತದ ತಂತ್ರಜ್ಞಾನ ಉದ್ಯಮದಿಂದ ಶೇ. 72ರಷ್ಟು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹೊರಗಿದ್ದಾರೆ ಎಂದು ಎಚ್ಚರಿಸಿದರು.