ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ವೇಗವಾಗಿ ವಿಶ್ವದ ಆರನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೆಲವೇ ದಿನಗಳಲ್ಲಿ 10ನೇ ಸ್ಥಾನಕ್ಕೆ ಇಳಿದಿದ್ದರು. ಈಗ ಈ ಹಿಂದಿನ ಸ್ಥಾನವನ್ನು ಮೀರಿ ಮತ್ತೊಂದು ಶ್ರೇಣಿಗೆ ಏರಿಕೆಯಾಗಿದ್ದಾರೆ.
ಫೋರ್ಬ್ಸ್ ನಿಯತಕಾಲಿಕೆಯ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಮುಖೇಶ್ ಅಂಬಾನಿ ಈಗ ವಿಶ್ವದ ಐದನೇ ಶ್ರೀಮಂತ ಉದ್ಯಮಿಯಾಗಿದ್ದಾರೆ. ತೈಲದಿಂದ ಟೆಲಿಕಾಂ ತನಕ ಹೂಡಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಅಮೆರಿಕದ ಹೂಡಿಕೆದಾರ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ 5ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.
ಅಂಬಾನಿಯ ಒಟ್ಟು ಸಂಪತ್ತು 75 ಬಿಲಿಯನ್ ಡಾಲರ್ (5.61 ಲಕ್ಷ ಕೋಟಿ ರೂ.) ಎಂದು ಅಂದಾಜಿಸಲಾಗಿದೆ. 89 ಬಿಲಿಯನ್ ಡಾಲರ್ ಮುಖೇನ್ ಫೇಸ್ಬುಕ್ ಸಹ ಸಂಸ್ಥಾಪಕ ಝುಕರ್ ಬರ್ಗ್ 4ನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಅಮೆಜಾನ್ ಸ್ಥಾಪಕ/ ಸಿಇಒ ಜೆಫ್ ಬೆಜೋಸ್ 185.8 ಬಿಲಿಯನ್ ಡಾಲರ್ ಮೂಲಕ ನಂ.1 ಸ್ಥಾನದಲ್ಲಿದ್ದಾರೆ. ಮೈಕ್ರೋಸಾಫ್ಟ್ ಕೋ ಫೌಂಡರ್ ಬಿಲ್ ಗೇಟ್ಸ್ 113.1 ಬಿಲಿಯನ್ ಡಾಲರ್ ಹಾಗೂ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬಸ್ಥರು 112 ಬಿಲಿಯನ್ ಡಾಲರ್ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಬುಧವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿದ್ದು, ಮೊದಲ ಬಾರಿಗೆ 2,000 ರೂ. ದಾಟಿದೆ. ಆರ್‌ಐಎಲ್ ಷೇರು ದರ ಸಾರ್ವಕಾಲಿಕ ಗರಿಷ್ಠ ಪ್ರತಿ ಷೇರಿಗೆ 2,010 ರೂ. ಮಟ್ಟಕ್ಕೆ ತಲುಪಿದೆ. ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್‌ಗಳಿಗೆ ವ್ಯಾಪಕ ಬಂಡವಾಳ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಮುಖೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಏರಿಕೆ ಕಂಡುಬಂದಿದೆ.
ಜಿಯೋ ಪ್ಲಾಟ್‌ಫಾರ್ಮ್‌ಗಳು ಕಳೆದ ಮೂರು ತಿಂಗಳಲ್ಲಿ 1,52,056 ಕೋಟಿ ರೂ. ಹೂಡಿಕೆಯನ್ನು ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ಪಡೆದಿವೆ. ಜಿಯೋನಲ್ಲಿ ಗೂಗಲ್ ಇತ್ತೀಚಿಗೆ 33,737 ಕೋಟಿ ರೂ. ಹೂಡಿಕೆ ಮಾಡಿದೆ.