ಪುಣೆ :ತಾಂತ್ರಿಕ ಯುಗದಲ್ಲಿ ವ್ಯವಹಾರ ಆರಂಭಿಸುವುದು ಬಹು ಕಠಿಣ ಸಾಹಸ. ಉದ್ಯಮಿಯಾಗಲು ಬಂಡವಾಳ, ಉತ್ಪನ್ನ ಅಥವಾ ಸೇವಾ ಮನೋಭಾವದ ಜೊತೆಗೆ ನಿರಂತರ ಪರಿಶ್ರಮ ಪಡುವವರಾಗಿರಬೇಕಾಗುತ್ತದೆ.
ಒಂದು ಕಲ್ಪನೆಯಿಂದ ಶುರುವಾದ ಬಂಡವಾಳ, ಹೂಡಿಕೆ, ಜಾಹೀರಾತು, ಮಾರ್ಕೇಟಿಂಗ್, ಮಾರಾಟದಲ್ಲಿ ಯಶಸ್ಸಿ ಸಾಧಿಸಲು ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಹಲವು ಕಸರತ್ತು ಮಾಡಿ ವ್ಯವಹಾರ ಪ್ರಾರಂಭಿಸಿದ ನಂತರ, ಅದನ್ನು ನಿರ್ವಹಿಸಲು ಮತ್ತು ಬೆಳೆಸಲು ದೃಢನಿಶ್ಚಯ ಮತ್ತು ತಾಳ್ಮೆ ಅತ್ಯಗತ್ಯವಿರುತ್ತದೆ.
ಬಹುತೇಕ ಉದ್ಯಮಿಗಳು ಒಂದು ಆಲೋಚನೆಯಿಂದ ಸಾಹಸೋದ್ಯಮಿಗಳಾಗಿ ಅಲ್ಪ ಬಂಡವಾಳದಲ್ಲಿ ಲಾಭದಾಯಕ ಮತ್ತು ಸುಸ್ಥಿರ ವ್ಯವಹಾರ ನಿರ್ಮಿಸುತ್ತಾರೆ. ಅಂತಹವರ ಸಾಲಿನಲ್ಲಿ ನಿಲ್ಲಬಲ್ಲ ಚಿಕ್ಕ ಹುಡುಗನೇ ಅರ್ಪಣ್ ಶ್ರೀವಾಸ್ತವ.
ಅರ್ಪಣ್ ಶ್ರೀವಾಸ್ತವ 21 ವರ್ಷದ ಯುವ ಉದ್ಯಮಿ. ಗಂಗಾ ನಗರ ಪ್ರಯಾಗ್ರಾಜ್ ಮೂಲದವರು. ಎರಡು ವರ್ಷಗಳ ಹಿಂದೆ, ಯುವ ಮತ್ತು ಮಹತ್ವಾಕಾಂಕ್ಷೆಯ ಶ್ರೀವಾಸ್ತವ, ತನ್ನ ಇಬ್ಬರು ಸಹೋದ್ಯೋಗಿಗಳಾದ ಸ್ವಾತಿ ರಾಮಕೃಷ್ಣನ್ ಮತ್ತು ಸಯಾನ್ಹಾ ಕ್ಷತ್ರಿಯ ಅವರ ಜೊತೆಗೂಡಿ ಪ್ರಾನ್ ಇಂಡಸ್ಟ್ರೀಸ್ ಎಂಬ ಐಟಿ ಸಂಸ್ಥೆಯೊಂದನ್ನು ಒಂದು ಲಕ್ಷಕ್ಕಿಂತ ಕಡಿಮೆ ಬಮಡವಾಳದಲ್ಲಿ ಸ್ಥಾಪಿಸಿದರು.
ಅಂದಿನ ಆ ಸಣ್ಣ ಕಂಪನಿಯು ಈಗಾಗಲೇ 1.2 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ನಡೆಸುತ್ತಿದೆ. ಪ್ರಾನ್ ಇಂಡಸ್ಟ್ರೀಸ್ ಐಟಿ ಕನ್ಸಲ್ಟಿಂಗ್, ಪ್ರೊಫೆಷನಲ್ ಟ್ರೈನಿಂಗ್, ಡಾಟಾ ಅನಾಲಿಟಿಕ್ಸ್ ಮತ್ತು ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿ ಪರಿಣತಿ ಪಡೆದ ಕಂಪನಿಯಾಗಿದೆ. ಅರ್ಪಣ್ ಶ್ರೀವಾಸ್ತವ ಮತ್ತು ಅವರ ಸಂಸ್ಥೆಯ ಗ್ರಾಹಕರನ್ನು ಶೆಲ್, ಐಬಿಎಂ, ವೇದಾಂತ್, ಮಾರ್ಸ್ಕ್ ಮತ್ತು ವೆರಿ ಝೋನ್‌ನಂತಹ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಮೆಚ್ಚುಗೆ ವ್ಯಕ್ತಪಡಿಸಿವೆ.