ಮುಂಬೈ: ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನ್ಯಾಷನಲ್ ಕ್ರಶ್/ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿರುವುದಾಗಿ ಮೆಕ್ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ತಿಳಿಸಿದೆ.
ಪಶ್ಚಿಮ ಮತ್ತು ದಕ್ಷಿಣ ಭಾರತದ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳನ್ನು ವೆಸ್ಟ್ ಲೈಫ್ ಡೆವಲಪ್‌ಮೆಂಟ್ ಲಿಮಿಟೆಡ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮೂಲಕ ನಿರ್ವಹಿಸುತ್ತದೆ.
ಮಂದಣ್ಣ ಅವರನ್ನ ಪ್ರಮುಖ ಬ್ರಾಂಡ್ ಅಭಿಯಾನದ ಭಾಗವಾಗಲಿದ್ದಾರೆ. ಕಂಪನಿಯು ತನ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಬ್ರಾಂಡ್ ಲೀಡರ್ಶಿಪ್ ಬಲಪಡಿಸಲು ಮೆಕ್ಡೊನಾಲ್ಡ್ಸ್ಗೆ ಮಹತ್ವದ ಹೆಜ್ಜೆಯ ಸೂಚಕವಾಗಿದೆ ಎಂದು ಕಂಪನಿ ಹೇಳಿದೆ.
ನಮ್ಮ ಪ್ರಮುಖ ಮಾರುಕಟ್ಟೆಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ, ಬ್ರಾಂಡ್ ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ ಎಂದು ಮೆಕ್ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ಮಾರುಕಟ್ಟೆ ಮತ್ತು ಸಂವಹನ ನಿರ್ದೇಶಕ ಆರ್.ಪಿ. ಅರವಿಂದ್ ತಿಳಿಸಿದ್ದಾರೆ.
25 ವರ್ಷದ ದಕ್ಷಿಣ ಭಾರತದ ನಟಿ ಅನೇಕ ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಯಜಮಾನ, ಚಮಕ್, ಅಂಜನಿ ಪುತ್ರ, ಪೊಗರು, ತೆಲುಗಿನಲ್ಲಿ ಚಲೋ, ಸರಿಲೇರು ನೀಕೆವ್ವರು, ಗೀತಾ ಗೋವಿಂದಮ್, ಡಿಯರ್ ಕಾಮ್ರೆಡ್, ದೇವದಾಸ್, ಭೀಷ್ಮ, ತಮಿಳಿನ ಸುಲ್ತಾನ್ನಲ್ಲಿ ನಟಿಸಿದ್ದಾರೆ.