ನವದೆಹಲಿ:ಗ್ರಾಹಕರಿಗೆ ಸುಲಭ ವಾಹನ ಸಾಲ ಒದಗಿಸುವ ಉದ್ದೇಶದಿಂದ ಮಹೀಂದ್ರಾ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ತಿಳಿಸಿದೆ.
ಒಪ್ಪಂದದ ಪ್ರಕಾರ, ಗ್ರಾಹಕರು ತಮ್ಮ ಕಾರು ಖರೀದಿ ಮೇಲೆ ಮಹೀಂದ್ರಾ ಫೈನಾನ್ಸ್‌ನಿಂದ ಹಣಕಾಸು ನೆರವಿಗೆ ವ್ಯಾಪಕ ಆಯ್ಕೆಗಳನ್ನು ಪಡೆಯಬಹುದು ಎಂದು ಎಂಎಸ್‌ಐ ಪ್ರಕಟಣೆಯಲ್ಲಿ ಹೇಳಿದೆ.
ಪ್ರಸ್ತುತ ನಡೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಗ್ರಾಹಕರಿಗೆ ಹಣಕಾಸಿನ ಲಭ್ಯತೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಕಂಪನಿಗಳು ಒಟ್ಟಾಗಿ ಇಂತಹ ಕರಾರು ಮಾಡಿಕೊಂಡಿವೆ ಎಂದಿದೆ.
ಮಹೀಂದ್ರಾ ಫೈನಾನ್ಸ್ ದೇಶಾದ್ಯಂತ ಬ್ಯಾಂಕೇತರ ಹಣಕಾಸು ಕಂಪನಿಯಾಗಿದ್ದು (ಎನ್‌ಬಿಎಫ್‌ಸಿ) ಪಟ್ಟಣ, ಗ್ರಾಮೀಣ ಮತ್ತು ಸಣ್ಣ ಆದಾಯವಿರುವ ಗ್ರಾಹಕರು ಸೇರಿದಂತೆ ಇತರರಿಗೆ ಸಾಲ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಎಂಎಸ್‌ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳಿದರು.
ಮಾರುತಿಯ ಚಿಲ್ಲರೆ ಮಾರಾಟದ ಮೂರನೇ ಒಂದು ಭಾಗದಷ್ಟು ಪಾಲು ಗ್ರಾಮೀಣ ಭಾರತದಿಂದ ಬಂದಿದೆ. ಗ್ರಾಹಕರು ಈಗ ಖರೀದಿಸಿ ನಂತರ ಪಾವತಿಸಿ, ಇಎಂಐನಂತಹ ಪ್ರಯೋಜನ ಪಡೆಯಬಹುದು ಎಂದರು.