ನವದೆಹಲಿ:ಮರೆತು ಹೋಗಿರುವ ತಮ್ಮ ಜಿಮೇಲ್ ಪಾಸ್‌ವರ್ಡ್ ಮರುಹೊಂದಿಸಲು ಸಹಾಯ ಮಾಡುವಂತೆ ವ್ಯಕ್ತಿಯೋರ್ವ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಟ್ವೀಟರ್ ಮುಖಾಂತರ ಕೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಜಿಮೇಲ್ ಪಾಸ್‌ವರ್ಡ್ ಮರೆತು ಹೋದರೆ ತುಂಬಾ ಕಿರಿಕಿರಿಯಾಗುತ್ತದೆ. ಇದಕ್ಕೆ ಸಾಕಷ್ಟು ಪರಿಹಾರಗಳು ಯೂಟ್ಯೂಬ್‌ನಲ್ಲಿವೆ. ಆಗಾಗ್ಗೆ ಸಂಭವಿಸುವ ಈ ಸಣ್ಣ ಹಿನ್ನಡೆಗಳು ಅಂತಹ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಆದರೆ, ಈ ಯುವಕ ಜಿಮೇಲ್ ಪಾಸ್ವರ್ಡ್ಗೆ ಕಂಪನಿ ಸಿಇಒಗೆ ಮನವಿ ಮಾಡಿದ್ದು ನೆಟ್ಟಿಗರಿಗೆ ತಮಾಷೆಯ ಸಂಗತಿಯಾಗಿದೆ.
ಹಲೋ ಸರ್, ನೀವು ಹೇಗಿದ್ದೀರಿ. ನನಗೆ ನೀವು ಒಂದು ಸಹಾಯ ಮಾಡಬೇಕು. ನಾನು ಮರೆತು ಹೋದ ಜಿಮೇಲ್ ಪಾಸ್‌ವರ್ಡ್ ಅನ್ನು ಮರು ಹೊಂದಿಸುವುದು ಹೇಗೆಂದು ನೀವು ನನಗೆ ಸಹಾಯ ಮಾಡಿ ಎಂದು ಟ್ವಿಟರ್ ಬಳಕೆದಾರ ಮಾಧನ್ 67966174 ಎಂಬುವವರು ಕೇಳಿದ್ದಾರೆ.
ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಸುಂದರ್ ಪಿಚೈ ಅವರು ಭಾರತ ಬೆಂಬಲಿಸಲು ಮುಂದೆ ಬಂದರು. ವೈದ್ಯಕೀಯ ಸರಬರಾಜು, ಅಪಾಯಕ್ಕ ತುತ್ತಾದ ಸಮುದಾಯಗಳನ್ನು ಬೆಂಬಲ, ನಿರ್ಣಾಯಕ ಮಾಹಿತಿ ಹಂಚಿಕೆಗೆ ಸಹಾಯ ಮಾಡುವ ಭಾರತ ಮತ್ತು ಯುನಿಸೆಫ್‌ಗೆ 135 ಕೋಟಿ ರೂ. ನೀಡುವುದಾಗಿ ಟ್ವೀಟ್ ಮಾಡಿದ್ದರು. ಟ್ವಿಟರ್ ಬಳಕೆದಾರ ಮಾಧನ್, ಇದೇ ಟ್ವೀಟ್ನಲ್ಲಿ ತಮ್ಮ ಜಿಮೇಲ್ ಪ್ರಶ್ನೆ ಪೋಸ್ಟ್ ಮಾಡಿದ್ದಾರೆ.
ಗೂಗಲ್ ಸಿಇಒ ಈ ವ್ಯಕ್ತಿಯ ಟ್ವೀಟ್ ಅನ್ನು ಇನ್ನೂ ನೋಡದಿದ್ದರೂ, ಅವರು ಏನು ಉತ್ತರಿಸುತ್ತಾರೆ ಎಂದು ಹಲವರು ಆಶ್ಚರ್ಯದಿಂದ ಎದುರು ನೋಡುತ್ತಿದ್ದಾರೆ. ಈ ಟ್ವೀಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು?