ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಖನಿಜಯುಕ್ತ ಶುದ್ಧ ಕುಡಿಯುವ ನೀರಿನ (ಮಿನರಲ್ ವಾಟರ್) ಬೇಡಿಕೆ ಹೆಚ್ಚಳಕ್ಕೆ ಅನುಗುಣವಾಗಿ ಗ್ರಾಹಕರಿಗೆ ನೇರ ವಿತರಣಾ ಸೇವೆ ಆರಂಭಿಸಿದ್ದೇವೆ ಎಂದು ಬಿಸ್ಲೆರಿ ತಿಳಿಸಿದೆ
ಉದ್ದೇಶಿತ ಈ ಸೇವೆಯು ನಗರಗಳಲ್ಲಿ ಲಭ್ಯವಾಗುತ್ತಿದೆ. ಗ್ರಾಹಕರು ನೇರವಾಗಿ ಕಂಪನಿಯ ವೆಬ್‌ಸೈಟ್‌ನಲ್ಲಿ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಆರ್ಡರ್ ಮಾಡಬಹುದು. ಗ್ರಾಹಕರಿಂದ ಆರ್ಡರ್ ಪಡೆದ ಕಂಪನಿಯು ತನ್ನ ವಿತರಣಾ ಜಾಲದ ಮೂಲಕ 48 ಗಂಟೆಗಳ ಒಳಗೆ ಮನೆ ಬಾಗಿಲಿಗೆ ಮಿನರಲ್ ವಾಟರ್ ತಲುಪಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಉತ್ತಮ ನೈರ್ಮಲ್ಯ ಹಾಗೂ ಶುದ್ಧ ನೀರು ಒದಗಿಸಲು ಸಜ್ಜಾಗುತ್ತಿದ್ದೇವೆ. ಈ ವಿಧಾನದ ಮೂಲಕ ಮಾರುಕಟ್ಟೆಯಲ್ಲಿನ ಬೇಡಿಕೆ- ಪೂರೈಕೆ ಅಂತರವನ್ನು ಪರಿಹರಿಸಲು ಬಯಸುತ್ತೇವೆ. ಇದೇ ವೇಳೆ, ಗ್ರಾಹಕರ ಸುರಕ್ಷಿತೆಗೆ ಖನಿಜಯುಕ್ತ ನೀರನ್ನು ಪೂರೈಸುತ್ತೇವೆ ಎಂದು ಬಿಸಿನೆಸ್ ಡೆವಲಪ್ಮೆಂಟ್ ನಿರ್ದೇಶಕ ಅಂಜನಾ ಘೋಷ್ ಹೇಳಿದ್ದಾರೆ.
ನೇರ ಗ್ರಾಹಕ ವಿಧಾನದಿಂದ ಬಿಸ್ಲೆರಿ ತನ್ನ ಗ್ರಾಹಕರಿಗೆ ಶುದ್ಧ ಮತ್ತು ಸುರಕ್ಷಿತ ಖನಿಜಯುಕ್ತ ನೀರನ್ನು ಅಗತ್ಯವಿದ್ದಾಗ ಅವರ ಮನೆ ಬಾಗಿಲಿಗೆ ತಲುಪಿಸಲಿದೆ. ಆರೋಗ್ಯ ಕಾಪಾಡುವಲ್ಲಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.