ನವದೆಹಲಿ:ಹೊರ ರಾಷ್ಟ್ರಗಳಲ್ಲಿ ಸಿಕ್ಕಿಬಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಿದ ನಂತರ ರಾಷ್ಟ್ರೀಯ ಪ್ರಯಾಣಿಕರ ವಾಹಕ ಏರ್ ಇಂಡಿಯಾ ಈಗ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಿದೆ.
ಲಾಕ್ಡೌನ್ನಿಂದ ಕೃಷಿಕರು ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಸಾಗಣೆ ಹಾಗೂ ಮಾರುಕಟ್ಟೆ ಇಲ್ಲದಂತಾಗಿತ್ತು. ಇದನ್ನು ಅರಿತ ಕೇಂದ್ರ, ಈ ಋತುವಿನಲ್ಲಿ ಬೇಸಾಯಗಾರರು ಬೆಳೆದಿದ್ದ ಹಣ್ಣು ಮತ್ತು ತರಕಾರಿಗಳನ್ನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲು ಏರ್ ಇಂಡಿಯ ನೆರವು ಪಡೆದುಕೊಂಡಿದೆ.
ಕೇಂದ್ರ ಸರ್ಕಾರವು ಕೃಷಿ ಉಡಾನ್ ಯೋಜನೆಯಡಿ ಜಗತ್ತಿನಾದ್ಯಂತ ಆಯ್ದ ಹತ್ತು ರಾಷ್ಟ್ರಗಳಿಗೆ ಹಣ್ಣು, ತರಕಾರಿ ಮತ್ತು ವೈದ್ಯಕೀಯ ಸರಕುಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸಲು ತನ್ನ ವಿಮಾನವನ್ನು ಸಕ್ರಿಯವಾಗಿ ಬಳಸಿಕೊಂಡಿದೆ.
ಏರ್ ಇಂಡಿಯಾ ವಿಮಾನಗಳು ಇಂಗ್ಲೆಂಡ್, ಜರ್ಮನಿ, ಇಸ್ರೇಲ್, ಚೀನಾ, ಸೀಸಲ್ಸ್, ಮಾರಿಷಸ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಮಾರ್ಗಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ. ಕೋವಿಡ್ -19 ಬಿಕ್ಕಟ್ಟಿನ ಮೊದಲು ವಿಮಾನಯಾನವು 58 ದೇಶಿಯ ಮತ್ತು 29 ಅಂತಾರಾಷ್ಟ್ರೀಯ ನಿಲ್ದಾಣಗಳೊಂದಿಗೆ ಸದೃಢವಾದ ಸರಕು ಹಾಗೂ ಪ್ರಯಾಣಿಕ ಕಾರ್ಯಾಚರಣೆ ನಡೆಸುತ್ತಿತ್ತು.
ತರಕಾರಿ, ಹಣ್ಣು, ಮಾಂಸ, ಸಮುದ್ರಾಹಾರ, ಲಸಿಕೆಗಳು, ಪತ್ರಿಕೆ ಮತ್ತು ಜಾನುವಾರುಗಳಂತಹ ಸರಕುಗಳನ್ನು ಸಾಗಿಸುವಲ್ಲಿ ವಿಮಾನಯಾನ ಪರಿಣತಿ ಪಡೆದುಕೊಂಡಿದೆ. ಇತ್ತೀಚೆಗೆ ಏರ್ ಇಂಡಿಯಾ 28.95 ಟನ್ ಹಣ್ಣು ಮತ್ತು ತರಕಾರಿಗಳನ್ನು ಲಂಡನ್‌ಗೆ ಸಾಗಿಸಿದೆ. 15.6 ಟನ್ ಸಾಮಾನ್ಯ ಸರಕು- ಸಾಮಗ್ರಿಗಳೊಂದಿಗೆ ವಾಪಸ್ ಭಾರತಕ್ಕೆ ಮರಳಿತು.