ಬೆಂಗಳೂರು:ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಅವರು 2020ನೇ ವರ್ಷದ ಇವೈ ವಿಶ್ವ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
41 ದೇಶಗಳಿಂದ 46 ನಾಮನಿರ್ದೇಶನಗಳಲ್ಲಿ ಬಯೋಕಾನ್ ಎಂಡಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2011ರಲ್ಲಿ ಸಿಂಗಾಪುರದಿಂದ ಹೈಫ್ಲಕ್ಸ್ ಲಿಮಿಟೆಡ್‌ನ ಒಲಿವಿಯಾ ಲುಮ್ ನಂತರ ಈ ಪ್ರಶಸ್ತಿ ಪಡೆದ 2ನೇ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
67 ವರ್ಷದ ಕಿರಣ್ ಅವರು ಬಯೋಕಾನ್ ಎಂಬ ಜೈವಿಕ ಕಂಪನಿಯನ್ನು 1978ರಲ್ಲಿ ಇಬ್ಬರು ಉದ್ಯೋಗಿಗಳೊಂದಿಗೆ 500 ಡಾಲರ್ ಹೂಡಿಕೆ ಮಾಡಿ ಸ್ಥಾಪಿಸಿದರು. ಕಂಪನಿಯು ಈಗ 11,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಕೋಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೋಟಕ್ (2014) ಮತ್ತು ಇನ್ಫೋಸಿಸ್ ಲಿ. ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ (2005) ಅವರು ಈ ಪ್ರಶಸ್ತಿ ಪಡೆದಿದ್ದರು.
ಮಜುಂದಾರ್ ಶಾ ಅವರು ಈ ಹಿಂದೆ 2002ರಲ್ಲಿ ಇವೈ ಅತ್ಯುತ್ತಮ ಉದ್ಯಮಿಯಾಗಿದ್ದರು. ಹೆಲ್ತ್‌ಕೇರ್ ಮತ್ತು ಲೈಫ್ ಸೈನ್ಸಸ್‌ನಲ್ಲಿ ಈ ಪ್ರಶಸ್ತಿ ಇವರ ಮುಡಿಗೇರಿತ್ತು. ಇವೈ ಉದ್ಯಮಿ ಆಫ್ ದಿ ಇಯರ್ ಇಂಡಿಯಾ 2019 ಪ್ರಶಸ್ತಿ ಸ್ವೀಕರಿಸಿದ್ದರು. 2020ರ ಫೆಬ್ರವರಿಯಲ್ಲಿ ಡಬ್ಲ್ಯುಇಒವೈ- 2020 ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿಯೂ ಬಯೋಕಾನ್ ಮುಖ್ಯಸ್ಥೆ ಭಾಗವಹಿಸಿದ್ದರು.