ನವದೆಹಲಿ: ಕಳೆದ ಒಂದು ವಾರದಿಂದ ಸಾಂಕ್ರಾಮಿಕ ವೈರಸ್ ಕೊರೊನಾ, ರಾಕ್ಷಸ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಸೂಕ್ಷ್ಮತೆಯನ್ನು ಅರಿತ ಪ್ರಧಾನಿ ಮೋದಿ, ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ರೈಲ್ವೆ ಇಲಾಖೆಯು ತನ್ನ ಸಾವಿರಾರು ಪ್ರಯಾಣಿಕ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದೆ.
ರೈಲ್ವೆ ಸಚಿವಾಲಯದ ಪ್ರಕಾರ, ಸುಮಾರು 3,700 ರೈಲುಗಳ ಸೇವೆಯನ್ನು ಮಾರ್ಚ್ 22ರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗುವುದು. ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಸಹಕಾರಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ರೈಲ್ವೆ ಸಚಿವಾಲಯ ಶನಿವಾರದ ಒಂದೇ ದಿನ 709 ರೈಲುಗಳ ಸಂಚಾರವನ್ನು ನಿಷೇಧಿಸಿದೆ. 584 ರೈಲುಗಳನ್ನು ಸಂಪೂರ್ಣವಾಗಿ ಸೇವೆಯಿಂದ ಮೊಟಕುಗೊಳಿಸಲಾಗಿದ್ದು, 125 ಟ್ರೈನ್ಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.
ಭಾರತೀಯ ರೈಲ್ವೆಯು 3,700ಕ್ಕೂ ಹೆಚ್ಚು ಪ್ರಯಾಣಿಕರ ಲೋಕೋಮೋಟಿವ್‌ಗಳು ಮತ್ತು ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ಸ್ಥಗಿತಗೊಳಿಸಿದೆ. ಭಾನುವಾರದ 'ಜನತಾ ಕರ್ಫ್ಯೂ' ಕರೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಏಕಕಾಲದಲ್ಲಿ ಸಾವಿರಾರು ಸಂಖ್ಯೆಯ ಪ್ರಯಾಣಿಕೆರ ರೈಲ್ವೆಗಳ ಸೇವೆಯನ್ನು ಸ್ಥಗಿತಗೊಳಿಸಿರಲಿಲ್ಲ. ಇದೇ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ಸೇವೆಯ ಸ್ಥಗಿತಕ್ಕೆ ರೈಲ್ವೆಯು ಮುಂದಾಗಿದೆ. ಇದರಿಂದ ಕೊರೊನಾ ಸೋಂಕಿನ ಅಗಾದ ಭೀಕರತೆ ಅರ್ಥವಾಗುತ್ತದೆ.