ಬೆಂಗಳೂರು:ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಮರು ಆರಂಭಿಸುವುದು ಕಷ್ಟಸಾಧ್ಯ ಎಂಬ ಮಾಹಿತಿಯನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೀಡಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಕಾಂತರಾಜ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿ, ಕಂಪನಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಒಟ್ಟು 1194.17 ಕೋಟಿ ರೂ. ನಷ್ಟದಲ್ಲಿದೆ. ಕಂಪನಿಯನ್ನು ಮತ್ತೆ ಆರಂಭಿಸಲು ಹೆಚ್ಚುವರಿಯಾಗಿ 1,500 ಕೋಟಿ ರೂ. ಬಂಡವಾಳ ಅಗತ್ಯವಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಂಪನಿಯಲ್ಲಿ ಸಾಕಷ್ಟು ಹಳೆ ಯಂತ್ರೋಪಕರಣಗಳು ಇವೆ. ಇವುಗಳ ಸ್ಥಾನಕ್ಕೆ ಹೊಸ ಯಂತ್ರೋಪಕರಣಗಳನ್ನು ಅಳವಡಿಸಬೇಕು. ಇದಕ್ಕೆ ತುಂಬಾ ದುಬಾರಿ ವೆಚ್ಚ ತಗಲಿದೆ. ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳಸದೇ ಇದ್ದುದರಿಂದ ಕಂಪನಿ ನಷ್ಟ ಅನುಭವಿಸುತ್ತಲೇ ಬಂದಿದೆ. ಮತ್ತೆ ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲದ ಮಾತು ಎಂದು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಗೆ ಮೇಜರ್ ಸರ್ಜರಿ: ಸಾಮೂಹಿಕ ವರ್ಗಾವಣೆ ಜೊತೆ ಮುಂಬಡ್ತಿ
ಈ ವೇಳೆ ಮಾತನಾಡಿದ ಬಿಜೆಪಿಯ ಆಯನೂರು ಮಂಜುನಾಥ್, ‘ಕಂಪನಿ ನಷ್ಟ ಅನುಭವಿಸಲು ಐಎಎಸ್ ಅಧಿಕಾರಿಗಳೇ ಕಾರಣ. ಅಧಿಕಾರಿಗಳ ತಪ್ಪು ನಡೆಯಿಂದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಮೂವರು ಐಎಎಸ್ ಅಧಿಕಾರಿಗಳು ಅತ್ಯುತ್ತಮ ಕಾರ್ಯನಿರ್ವಹಣೆ ಮಾಡಿ ವಾರ್ಷಿಕ ಐದಾರು ಕೋಟಿ ರೂಪಾಯಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭ ತಂದು ಹದಿನೈದು-ಇಪ್ಪತ್ತು ಕೋಟಿ ಲಾಭ ತೋರಿಸಿ, ಸರ್ಕಾರದ ಬೇರೆ ಸಂಸ್ಥೆಗೆ ಸಾಲ ನೀಡುವ ಮಟ್ಟಕ್ಕೆ ಬೆಳೆಸಿದ್ದರು ಎಂದರು.
ಹೆಚ್ಚಿನ ಅಧಿಕಾರಿಗಳು ಕೇವಲ ಹಣ ಗಳಿಕೆಗೆ ಅಷ್ಟೇ ಸೀಮಿತವಾಗಿ ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಮುಂದಾಗಲಿಲ್ಲ. ಈ ಭೂಮಿಯನ್ನು ಒಂದಿಷ್ಟು ಅರಣ್ಯ ಇಲಾಖೆಗೂ ವಹಿಸಿ ಅದಕ್ಕೋಸ್ಕರ ವಿಶೇಷ ಐಎಫ್ಎಸ್ ಅಧಿಕಾರಿಯನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇವರಿಂದಲೇ ಯಾವುದೇ ಅಭಿವೃದ್ಧಿ ಕಂಡುಬಂದಿಲ್ಲ. ಒಟ್ಟಾರೆಯಾಗಿ ಸುಸ್ಥಿತಿಯಲ್ಲಿ ಇರಬೇಕಿದ್ದ ಸಂಸ್ಥೆ ಯಂತ್ರೋಪಕರಣಗಳು ಹಳೆಯದಾಗಿರುವ ಕಾರಣದಿಂದ ಮಾತ್ರವಲ್ಲದೆ ಅಧಿಕಾರಿಗಳ ನಿರ್ಲಕ್ಷದಿಂದ ಈ ಸ್ಥಿತಿ ತಲುಪಿದೆ ಎಂದು ಆರೋಪಿಸಿದರು.
ಸಾಕಷ್ಟು ಸುದೀರ್ಘ ಚರ್ಚೆಯ ನಂತರವೂ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಪುನಶ್ಚೇತನವನ್ನು ಸರ್ಕಾರ ಮಾಡುವುದಿಲ್ಲ ಎಂಬ ಮಾಹಿತಿ ನೀಡಲಾಯಿತೇ ಹೊರತು ಇದನ್ನು ಖಾಸಗಿಯವರಿಗೆ ನೀಡಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಸಿಗಲಿಲ್ಲ.
ಪ್ರಶ್ನೋತ್ತರ ಅವಧಿ ನಂತರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದರು.