ನವದೆಹಲಿ :ಮುಂದಿನ ಎರಡು ವರ್ಷಗಳಲ್ಲಿ 12,000 ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಲಾಗಿದೆ ಎಂದು ಐಟಿ ದೈತ್ಯ ಇನ್ಫೋಸಿಸ್ ಹೇಳಿದೆ. ದೇಶದಲ್ಲಿ ತನ್ನ ನೇಮಕಾತಿ ಬದ್ಧತೆಯನ್ನು ಐದು ವರ್ಷಗಳಲ್ಲಿ 25,000ಕ್ಕೆ ಕೊಂಡೊಯ್ಯಲಿದೆ. 2017ರಲ್ಲಿ ಇನ್ಫೋಸಿಸ್ ಎರಡು ವರ್ಷಗಳಲ್ಲಿ 10,000 ಅಮೆರಿಕನ್ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬದ್ಧವಾಗಿತ್ತು.
ಕಂಪನಿಯು ಅಮೆರಿಕದಲ್ಲಿ 13,000 ಉದ್ಯೋಗಗಳನ್ನು ಸೃಷ್ಟಿಸಿದೆ. 2022ರ ವೇಳೆಗೆ ಇನ್ನೂ 12,000 ನೌಕರರನ್ನು ವಿವಿಧ ವಿಭಾಗಗಳಲ್ಲಿ ನೇಮಿಸಿಕೊಳ್ಳಲು ಯೋಜಿಸಿದೆ ಎಂದು ನಾಸ್ಡಾಕ್ಗೆ ಸಂಸ್ಥೆಯು ತನ್ನ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ. ಭವಿಷ್ಯದ ಅತ್ಯುತ್ತಮ ಉದ್ಯೋಗಿಗಳ ತಂಡ ಕಟ್ಟಲು ಅನುಭವಿ ತಂತ್ರಜ್ಞಾನದ ವೃತ್ತಿಪರರು, ಪ್ರಮುಖ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ಕಲಾ ಕಾಲೇಜುಗಳ ಇತ್ತೀಚಿನ ಪದವೀಧರರನ್ನು ಗುರಿಯಾಗಿಸಿಕೊಂಡು ನೇಮಕಾತಿ ನಡೆಯಲಿದೆ ಎಂದು ಇನ್ಫೋಸಿಸ್ ಹೇಳಿದೆ.
ಇತ್ತೀಚೆಗೆ ತನ್ನ ಪಾಲುದಾರರೊಂದಿಗೆ ತರಬೇತಿ ಮತ್ತು ಮರುಕೌಶಲ್ಯ ಕಾರ್ಯಕ್ರಮಗಳನ್ನು ಸ್ಥಾಪಿಸಿದೆ. ಈ ಮೂಲಕ ಇನ್ಫೋಸಿಸ್ 21ನೇ ಶತಮಾನದ ಅತ್ಯುತ್ತಮ ಕಾರ್ಮಿಕರನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದೆ. ಕಳೆದ ಮೂರು ವರ್ಷಗಳಿಂದ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯತ್ತ ಇನ್ಫೋಸಿಸ್ ತೀವ್ರ ಗಮನ ಹರಿಸುತ್ತಿದೆ. 2022ರ ವೇಳೆಗೆ 12,000 ಅಮೆರಿಕನ್ ಕಾರ್ಮಿಕರನ್ನು ನೇಮಿಸಿಕೊಳ್ಳುವ ಈ ಹೊಸ ಬದ್ಧತೆಯು ಹಿಂದಿನ ಉಪಕ್ರಮದ ಭಾಗವೆಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.
ನಮ್ಮ ಗ್ರಾಹಕರ ಡಿಜಿಟಲ್ ರೂಪಾಂತರದ ಪ್ರಯಾಣವು ವೇಗ ಆಗುತ್ತಿದ್ದಂತೆ ಅಮೆರಿಕದಲ್ಲಿ ನಮ್ಮ ಉಪಸ್ಥಿತಿಯನ್ನು ಬೆಳೆಸಲು ನಾವು ಉತ್ಸುಕರಾಗಿದ್ದೇವೆ ಎಂದರು. ಕೋವಿಡ್-19 ಸಾಂಕ್ರಾಮಿಕವು ಆರ್ಥಿಕ ಪ್ರಕ್ಷುಬ್ಧತೆ ಸೃಷ್ಟಿಸಿರುವುದರಿಂದ 12,000 ಹೊಸ ಅಮೆರಿಕನ್ ಉದ್ಯೋಗಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯು ನಿರ್ಣಾಯಕ ಕ್ಷಣದತ್ತ ಬಂದಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ರವಿ ಕುಮಾರ್ ಹೇಳಿದರು.