ಕೊಯಮತ್ತೂರ್:ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೊಯಮತ್ತೂರಿನ ಇಡ್ಲಿ ಅಮ್ಮಾ ಅವರ ಸ್ಫೂರ್ತಿದಾಯಕ ಕಥೆಯನ್ನು ತಮ್ಮ ಮೈಕ್ರೋ ಬ್ಲಾಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇಳಿವಯಸ್ಸಿನಲ್ಲೂ ದುಡಿದು ಬದುಕಬೇಕೆಂಬ ವೃದ್ಧೆಯ ಮನೋಭಾವಕ್ಕೆ ಕರಗಿ ಕ್ಯಾಂಟೀನ್ ಕಮ್ ಹೌಸೊಂದನ್ನು ಕಟ್ಟಿಸಿಕೊಡಲು ಮುಂದಾಗಿದ್ದಾರೆ.
ಕೊಯಮತ್ತೂರಿನಲ್ಲಿ ಬರೀ ಒಂದು ರೂಪಾಯಿಗೆ ಇಡ್ಲಿ ಮಾರುವ ಕಮಲಥಾಲ್ ಎಂಬ 'ಇಡ್ಲಿ ಅಮ್ಮ' ಅವರಿಗೆ ಮಹೀಂದ್ರಾ ಗ್ರೂಪ್ನಿಂದ ಮನೆ/ ಕ್ಯಾಂಟೀನ್ ಒಂದನ್ನು ಕಟ್ಟಿಸಿಕೊಡಲಾಗುತ್ತಿದೆ. ಇಡ್ಲಿಗಳನ್ನು ಬೇಯಿಸಲು ಮತ್ತು ಮಾರಾಟ ಮಾಡಲು ಸ್ವಂತ ಮನೆ ಕಮ್ ಕ್ಯಾಂಟೀನ್ ಆಗಿ ಪರಿರ್ವತನೆಯಾಗಲಿದೆ.
ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರಾ, ಯಾರೋ ಒಬ್ಬರ ಪ್ರೇರಣದಾಯಕ ಕಥೆಯಲ್ಲಿ ಅಪರೂಪಕ್ಕೆ ಒಬ್ಬರು ಚಿಕ್ಕ ಪಾತ್ರ ನಿರ್ವಹಿಸುತ್ತಾರೆ. ಇಂತಹ ಸಣ್ಣ ಪಾತ್ರ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿದಕ್ಕೆ ಇಡ್ಲಿ ಅಮ್ಮಾ ಎಂದೇ ಹೆಸರಾಗಿರುವ ಕಮಲಥಾಲ್ ಅವರಿಗೆ ಧನ್ಯವಾದಗಳು. ಇಡ್ಲಿ ಮಾಡಲು ಹಾಗೂ ಮಾರಲು ನೆರವಾಗುವಂತಹ ಮನೆಯನ್ನು ಶೀಘ್ರದಲ್ಲಿ ಅವರು ಹೊಂದಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.