ನವದೆಹಲಿ:ಆಟೋ ವಲಯದಲ್ಲಿ ಕಚ್ಚಾ ಮತ್ತು ತಯಾರಿಕಾ ವೆಚ್ಚ ಏರಿಕೆ ಆಗುತ್ತಿರುವುದರಿಂದ ಇದರ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಕಂಪನಿಗಳು ಮುಂದಾಗಿವೆ.
ಎರಡು ತಿಂಗಳ ಹಿಂದೆ ಟಾಟಾ, ಮಾರುತಿ ಕಾರು ತಯಾರಿಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಸಿರುವುದಾಗಿ ಘೋಷಿಸಿದ್ದವು. ಈಗ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಕೂಡ ತನ್ನ ಉತ್ಪನ್ನಗಳ ದರ ಏರಿಸುತ್ತಿದೆ.
ಎಚ್‌ಎಂಐಎಲ್ ತನ್ನ ಕಾರುಗಳ ದರಗಳನ್ನು ಆಗಸ್ಟ್ 1ರಿಂದ ಹೆಚ್ಚಿಸುವುದಾಗಿ ತಿಳಿಸಿದೆ. ದರಗಳು 9,200 ರೂ.ಗಳಿಂದ ಏರಲಿವೆ. ಕೋನಾ ಮತ್ತು ವೆನ್ಯೂ ಕಾರುಗಳು ಹೊರತುಪಡಿಸಿ ಎಲ್ಲ ಮಾದರಿಯ ಕಾರುಗಳ ಬೆಲೆ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರವು ವಾಹನಗಳಲ್ಲಿ ಹೆಚ್ಚಿನ ಸುರಕ್ಷಾ ನಿಯಮಗಳನ್ನು ಅಳವಡಿಸುವಂತಹ ನಿಯಮಗಳನ್ನು ಜಾರಿಗೆ ತಂದಿದೆ. ತಯಾರಿಕಾ ಮತ್ತು ಕಚ್ಚಾ ಸಾಮಗ್ರಿಗಳ ಬೆಲೆ ಕೂಡ ಏರಿಕೆ ಆಗಿದ್ದರಿಂದ ಕಾರುಗಳ ದರ ಹೆಚ್ಚಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.