ನವದೆಹಲಿ: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ 'ಟಿಕ್ಟಾಕ್' ಮತ್ತು 'ಹೆಲೋ' ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ ಉತ್ತರ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ್ (ಎಸ್ಜೆಎಂ), ಈ ಎರಡೂ ಅಪ್ಲಿಕೇಷನ್ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿ ಪ್ರಧಾನಿಗೆ ದೂರು ಸಲ್ಲಿಸಿದ್ದರು. ಈ ದೂರು ಪ್ರಧಾನಿ ಕಚೇರಿ ತಲುಪಿದ್ದರಿಂದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಇದನ್ನು ಗಂಭೀರವಾಗಿ ಪರಿಗಣಿಸಿ 21 ಪ್ರಶ್ನೆಗಳಿಗೆ ಉತ್ತರ ಬಯಸಿ ನೋಟಿಸ್ ನೀಡಿದೆ.