ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ರಕ್ತಪಾತ ಹರಿಸಿದ ಬಳಿಕ ನೆರೆಯ ದೇಶ ಪಾಕ್ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿ ಪಾಕ್ ಪ್ರಜೆಗಳು ಇಟ್ಟಿದ್ದ 1,100 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.
ಈ ಷೇರುಗಳನ್ನು ಶತ್ರು ಆಸ್ತಿ ಕಾಯ್ದೆ1968ರಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಎಲ್ಲಾ ಷೇರುಗಳು ಗೃಹ ಇಲಾಖೆಯ ಶತ್ರು ಆಸ್ತಿ ವಾರಸುದಾರ ವಿಭಾಗದ (CEPI) ಅಧೀನದಲ್ಲಿತ್ತು.
ಭಾರತದಲ್ಲಿದ್ದ ಪಾಕ್ ಪ್ರಜೆಗಳ ಷೇರುಗಳನ್ನು ಮಾರಾಟ ಮಾಡುವ ತೀರ್ಮಾನವನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೈಗೊಂಡಿದೆ. 1960ರ ದಶಕದಲ್ಲಿ ಭಾರತ-ಪಾಕ್ ಯುದ್ಧ ನಡೆದ ಬಳಿಕ ಸಂಸತ್ತು ಶತ್ರು ಆಸ್ತಿ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಅಜೀ ಪ್ರೇಮ್ ಜಿ ಒಡೆತನದ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 4.3 ಕೋಟಿ ಷೇರುಗಳನ್ನು ರೂ. 258 ಮುಖಬೆಲೆಗೆ ಮಾರಾಟ ಮಾಡಲಾಗಿದೆ. ಇವುಗಳಲ್ಲಿ ಶೇ. 80ಕ್ಕೂ ಹೆಚ್ಚು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮ ಖರೀದಿಸಿದೆ. ಭಾರತದಲ್ಲಿದ್ದ ಪಾಕ್ ಪ್ರಜೆಗಳ ಅಂದಾಜು 3,000 ಕೋಟಿ ರೂ ಷೇರುಗಳು ಹಾಗು 1 ಲಕ್ಷ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ (ಜಮೀನು) ಗೃಹ ಇಲಾಖೆಯ ಸಿಇಪಿಐ ಒಡೆತನದಲ್ಲಿತ್ತು. ಇವುಗಳನ್ನು ದೇಶದಲ್ಲಿರುವ 'ಶತ್ರು ಆಸ್ತಿ' ಎಂದೇ ಪರಿಗಣಿಸಲಾಗಿದೆ.
2017 ರಲ್ಲಿ ಕೇಂದ್ರ ಸರ್ಕಾರ ಶತ್ರು ರಾಷ್ಟ್ರ ಆಸ್ತಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಪ್ರಕಾರ, ದೇಶ ವಿಭಜನೆಯ ಬಳಿಕ ಪಾಕಿಸ್ತಾನ ಹಾಗೂ ಚೀನಾಗೆ ವಲಸೆ ಹೋದ ಜನರಿಗೆ ದೇಶದಲ್ಲಿ ಅವರು ಬಿಟ್ಟು ಹೋದ ಆಸ್ತಿಪಾಸ್ತಿ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ. ಇದೇ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಪಾಕ್ ಪ್ರಜೆಗಳ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ಷೇರು ಮಾರಾಟದಿಂದ ಬರುವ ಆದಾಯದ ಮೊತ್ತ 'ಹೂಡಿಕೆ ಹಿಂತೆಗೆತ'ದಂತೆ ಹಣಕಾಸು ಸಚಿವಾಲಯಕ್ಕೆ ಜಮೆಯಾಗಲಿದೆ. ಈ ಪ್ರಕ್ರಿಯೆ ಮುಂದುವರಿಯಲಿದ್ದು ಮೊದಲ ಹಂತದಲ್ಲಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಷೇರು ಮಾರಾಟ ಮಾಡಲಾಗಿದೆ. ಈ ಹಿಂದೆ ಪಾಕಿಸ್ತಾನ ಸರ್ಕಾರ ಕೂಡಾ ಇದೇ ರೀತಿಯ ನಿರ್ಧಾರ ಕೈಗೊಂಡಿತ್ತು. ದೇಶ ವಿಭಜನೆ ಸಂದರ್ಭದಲ್ಲಿ ಪಾಕ್ ಬಿಟ್ಟು ಭಾರತಕ್ಕೆ ವಲಸೆ ಬಂದ ಜನರ ಆಸ್ತಿಪಾಸ್ತಿಗಳನ್ನು ಆ ದೇಶ ಮುಟ್ಟುಗೋಲು ಹಾಕಿಕೊಂಡಿತ್ತು.
ಪಾಕ್ ಪ್ರಜೆಗಳ ಷೇರುಗಳು ಒಳಗೊಂಡಂತೆ, ಒಟ್ಟು 996 ಕಂಪನಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪಾಲುದಾರರ 6.5 ಕೋಟಿ ಷೇರುಗಳು ಗೃಹ ಇಲಾಖೆಯ ಶತ್ರು ಆಸ್ತಿ ವಾರಸುದಾರ ವಿಭಾಗದಲ್ಲಿದೆ. ಇವುಗಳ ಮಾರಾಟ ಪ್ರಕ್ರಿಯೆ ಮುಂದುವರಿಯಲಿದೆ.