ನವದೆಹಲಿ: ಫೋಟೋ ವೀಕ್ಷಣೆ ಮತ್ತು ಎಡಿಟಿಂಗ್ ಅಪ್ಲಿಕೇಷನ್, ಗೂಗಲ್ ಫೋಟೋಸ್ ಅದರ ಕ್ಲೌಡ್ ಸ್ಟೋರೇಜ್ ಸಾಮರ್ಥ್ಯ ಮತ್ತು ಲುಕ್‌ಬ್ಯಾಕ್ ವೈಶಿಷ್ಟ್ಯದಿಂದಾಗಿ ಬಳಕೆದಾರರಲ್ಲಿ ಬಹು ಜನಪ್ರಿಯವಾಗಿದೆ. ಈಗಿನ ಕನಿಷ್ಠ ಎಡಿಟಿಂಗ್ ಫೀಚರ್ಗಳ ಉಚಿತ ಲಭ್ಯತೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಕೆಲವು ಬಳಕೆದಾರರು ಅಪ್ಲಿಕೇಷನ್‌ನಲ್ಲಿ ಪೇವಾಲ್ ಜಾರಿಯ ಬಗ್ಗೆ ವರದಿ ಮಾಡುತ್ತಿದ್ದಾರೆ. ಎಕ್ಸ್‌ಡಿಎ ಡೆವಲಪರ್ ವರದಿಯ ಪ್ರಕಾರ, ಎಡಿಟಿಂಗ್ ಅಪ್ಲಿಕೇಷನ್‌ನಲ್ಲಿನ ನಿರ್ದಿಷ್ಟ ಫೀಚರ್ಗಳಿಗಾಗಿ ಗೂಗಲ್ ಫೋಟೋ ಪೇವಾಲ್ ಪರಿಚಯಿಸಲಿದೆ ಎಂದಿದೆ.
ಯಾವುದೇ ಸ್ಪಷ್ಟ ಮಾಹಿತಿಯಿಲ್ಲದ ಚಿತ್ರಗಳ ಜತೆಗೆ ಕಲರ್ ಪಾಪ್ ಫಿಲ್ಟರ್ ಬಳಸಲು ಪ್ರಯತ್ನಿಸುವ ಬಳಕೆದಾರರು, ಚಂದಾದಾರಿಕೆ ಶುಲ್ಕ ಪಾವತಿಸಬೇಕಾಗಬಹುದು. ಈ ಚಂದಾದಾರಿಕೆ ಶುಲ್ಕ ಗೂಗಲ್ ಒನ್ ರೂಪದಲ್ಲಿ ವಿಧಿಸಲಾಗುತ್ತದೆ ಎನ್ನಲಾಗುತ್ತಿದೆ.
ಗೂಗಲ್ ಒನ್ ಚಂದಾದಾರಿಕೆ ಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ. ಫಿಲ್ಟರ್ ಬಳಸುವ ಮೊದಲು ಗೂಗಲ್ ಒನ್ ಚಂದಾದಾರಿಕೆ ಶುಲ್ಕ ಕೋರಲಾಗಿದೆ ಎಂದು ಯುಕೆ ಬಳಕೆದಾರರು ವರದಿ ಮಾಡಿದ್ದಾರೆ. ಫೋಟೋಗಳ ಅಪ್ಲಿಕೇಷನ್ 5.18 ಆವೃತ್ತಿ ಪೇವಾಲ್ ತೋರಿಸಿದೆ ಎಂದು ವರದಿ ಸೂಚಿಸುತ್ತದೆ.
ಭಾರತದಲ್ಲಿ ಗೂಗಲ್ ಒನ್ ಚಂದಾದಾರಿಕೆಗೆ ತಿಂಗಳಿಗೆ ₹ 130 ಅಥವಾ 100 ಜಿಬಿಗೆ ವರ್ಷಕ್ಕೆ 1300 ರೂ. ಬೆಲೆಯಿದೆ. 200 ಜಿಬಿ ಬಳಕೆದಾರರು ತಿಂಗಳಿಗೆ 210 ರೂ. ಅಥವಾ ವಾರ್ಷಿಕ 2,100 ರೂ. ಪಾವತಿಸಬೇಕಾಗುತ್ತದೆ. ಒಟ್ಟು 2 ಟಿಬಿ ಸಂಗ್ರಹಣೆಯ ಮಾಸಿಕ 650 ರೂ. ಅಥವಾ ವರ್ಷಕ್ಕೆ 6,500 ರೂ. ಶುಲ್ಕವಿದೆ.