ನವದೆಹಲಿ:ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಟಿಕ್ಟಾಕ್ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದ್ದ ಬೆನ್ನಲ್ಲೇ ಗೂಗಲ್ ಸಂಸ್ಥೆ ಟಿಕ್ಟಾಕ್ಅನ್ನು ಭಾರತದಲ್ಲಿ ಬ್ಲಾಕ್ ಮಾಡಿದೆ.
ಆ್ಯಪ್ ಮೇಲಿನ ನಿಷೇಧ ತೆರವುಗೊಳಿಸುವಂತೆ ಚೀನಾದ ಬೈಟ್ಡಾನ್ಸ್ ಟೆಕ್ನಾಲಜಿ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಗೂಗಲ್ ಹಾಗೂ ಆ್ಯಪಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಟಿಕ್ಟಾಕ್ ನಿಷೇಧಿಸುವಂತೆ ಸೂಚಿಸಿತ್ತು ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಟಿಕ್ಟಾಕ್ ನಿಷೇಧಿಸುವಂತೆ ಏಪ್ರಿಲ್ 3ರಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿತ್ತು. ಅಶ್ಲೀಲ ಹಾಗೂ ಅಸಭ್ಯ ವಿಡಿಯೋ ತುಣುಕುಗಳು ಆ ಆ್ಯಪ್ನಲ್ಲಿ ಹರಿದಾಡುತ್ತಿವೆ. ಇದರಲ್ಲಿರುವ ವಿಡಿಯೋಗಳಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬ ಕಾರಣವನ್ನು ಅದು ನೀಡಿತ್ತು.
ವಿಶ್ವದಲ್ಲಿಯೇ ಅತಿ ಹೆಚ್ಚು ಆ್ಯಪ್ ಡೌನ್ಲೋಡ್ಗೊಂಡ ಸ್ಥಾನಗಳ ಪೈಕಿ ಟಿಕ್ಟಾಕ್ 4ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 24 ಕೋಟಿಗೂ ಅಧಿಕ ಡೌನ್ಲೋಡ್ ಮಾಡಿಕೊಳ್ಳಲಾಗಿದೆ. ಆದರೆ, ಜಗತ್ತಿನಾದ್ಯಂತ 50 ಕೋಟಿಗೂ ಅಧಿಕ ಗ್ರಾಹಕರಿದ್ದು, ಇದರಲ್ಲಿ ಅರ್ಧದಷ್ಟು ಭಾರತೀಯರೇ ಇದ್ದಾರೆ.