ಕೋಲ್ಕತ್ತಾ:ಜೊಮ್ಯಾಟೋ ಆಹಾರ ವಿತರಕ ಸಿಬ್ಬಂದಿ ದನ ಮತ್ತು ಹಂದಿ ಮಾಂಸದ ಆಹಾರ ಉತ್ಪನ್ನಗಳನ್ನು ವಿತರಿಸುವುದಿಲ್ಲ ಎಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದನ ಹಾಗೂ ಹಂದಿ ಮಾಂಸದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ವಿತರಿಸುವಂತೆ ಸಂಸ್ಥೆಯು ನಮ್ಮ ಮೇಲೆ ಒತ್ತಡ ಹೇರುತ್ತಿದೆ. ನಮ್ಮ ಬೇಡಿಕೆಗಳಿಗೆ ಸಂಸ್ಥೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ದೂರಿದ್ದಾರೆ.
ಜೊಮ್ಯಾಟೋ ಆಹಾರ ಪೂರೈಕೆ ಸಂಸ್ಥೆಯು ಈಚೆಗೆ ಕೆಲವು ಹೊಸ ಹೋಟೆಲ್ಗಳೊಂದಿಗೆ ನೂತನ ಒಪ್ಪಂದ ಮಾಡಿಕೊಂಡ ಬಳಿಕ ಈ ಸಮಸ್ಯೆ ಉದ್ಭವವಾಗಿದೆ. ನಮ್ಮ ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿ ದನ ಮತ್ತು ಹಂದಿ ಮಾಂಸದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸಿಬ್ಬಂದಿ ಆಪಾದಿಸಿದ್ದಾರೆ.
ರಾಜ್ಯ ಸರ್ಕಾರದ ಗಮನಕ್ಕೂ ಈ ವಿಚಾರ ಬಂದಿದ್ದು, ಸಚಿವ ರಾಜೀಬ್ ಬ್ಯಾನರ್ಜಿ ಅವರು, ಯಾವುದೇ ಉದ್ಯಮ ಸಂಸ್ಥೆ ತನ್ನ ಸಿಬ್ಬಂದಿ ಧರ್ಮಕ್ಕೆ ವಿರುದ್ಧವಾಗಿ ಹೋಗಬಾರದು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.