ನವದೆಹಲಿ:ಫೇಸ್‌ಬುಕ್ ದುರುಪಯೋಗದ ವಿವಾದದ ನಡುವೆಯೂ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ಸಂಸದೀಯ ಸಮಿತಿಯ ಮುಂದೆ ಇಂದು ಹಾಜರಾಗಿ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ದುರುಪಯೋಗದ ಬಗ್ಗೆ ಚರ್ಚಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಫೇಸ್‌ಬುಕ್‌ನ ಪ್ರತಿನಿಧಿಗಗಳಿಂದ ತಮ್ಮ ಅಭಿಪ್ರಾಯ ಕೇಳಲು ಆಹ್ವಾನಿಸಿತ್ತು. ನಾಗರಿಕರ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ/ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗ ತಡೆಗಟ್ಟುವ ವಿಷಯ ಮತ್ತು ಮಹಿಳೆಯರಿಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು.
ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಅವರು ಇಂದು ಮಧ್ಯಾಹ್ನ ಸಮಿತಿಯ ಮುಂದೆ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಿತಿಯು ಇದೇ ವಿಷಯದ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಸಹ ಕರೆದಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್, ತನ್ನ ದ್ವೇಷ-ಭಾಷಣ ನಿಯಮಗಳನ್ನು ಬಿಜೆಪಿಯ ರಾಜಕಾರಣಿಗಳಿಗೆ ಅನ್ವಯಿಸುವುದನ್ನು ನಿರ್ಲಕ್ಷಿಸಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಬಗ್ಗೆ ಫೇಸ್‌ಬುಕ್‌ನಿಂದ ಸ್ಪಷ್ಟನೆ ಕೇಳಲು ಬಯಸುತ್ತೇವೆ ಎಂದು ತರೂರ್ ಕೇಳಿದ್ದರು. ಈ ವರದಿಯನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿತ್ತು.