ನವದೆಹಲಿ :ಭಾರತದ ಚುನಾವಣಾ ಆಯೋಗದ ಆಯುಕ್ತ ಅಶೋಕ್ ಲವಾಸಾ ಅವರನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ನ (ಎಡಿಬಿ) ಖಾಸಗಿ ವಲಯದ ಕಾರ್ಯಾಚರಣೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ದಿವಾಕರ್ ಗುಪ್ತಾ ಅವರ ಅಧಿಕಾರಾವಧಿ ಅಗಸ್ಟ್ 31ಕ್ಕೆ ಕೊನೆಗೊಳ್ಳಲಿದೆ. ಅವರ ಬಳಿಕ ಲವಾಸಾ ಅವರು ಆ ಹುದ್ದೆಗೆ ಏರಲಿದ್ದಾರೆ. ಲವಾಸಾ ಈ ಹಿಂದೆ ಹಣಕಾಸು ಕಾರ್ಯದರ್ಶಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸೇರಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸ್ಟೇಟ್ ಮತ್ತು ಫೆಡರಲ್ ಮಟ್ಟದಲ್ಲಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ. ಸಾರ್ವಜನಿಕ ನೀತಿ ಮತ್ತು ಖಾಸಗಿ ವಲಯದ ಪಾತ್ರದ ಬಗ್ಗೆ ಆಳ ಜ್ಞಾನ ಹೊಂದಿದ್ದಾರೆ ಎಂದು ಎಡಿಬಿ ಹೇಳಿದೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕ್ಲೀನ್‌ಚಿಟ್ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದವರಲ್ಲಿ ಒಬ್ಬರಾಗಿದ್ದರು. ಈ ಭಿನ್ನಾಭಿಪ್ರಾಯ ಕಳೆದ ವರ್ಷ ಇಡೀ ದೇಶದ ಗಮನ ಸೆಳೆದಿತ್ತು.