ನವದೆಹಲಿ:ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸದಸ್ಯತ್ವ ಪಡೆದ ಕೈಗಾರಿಕಾ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸದಂತೆ ಸಿಐಐ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಏಕಾಏಕಿ ಜಾಗತಿಕವಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಭಾರತ ಸೇರಿದಂತೆ ಹಲವು ಕಂಪನಿಗಳಿಗೆ ಆತಂಕ ಉಂಟಾಗಿದೆ. ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು ನಿಧಾನಗತಿಯ ಬೇಡಿಕೆ ಮತ್ತು ವಿವಿಧ ಸೇವೆಗಳ ಮೇಲೆ ನಿರ್ಬಂಧನೆಗಳನ್ನು ಹೇರಲಾಗಿದೆ. ಇದು ಸವಾಲಿನ ಸಮಯ ಎಂಬುದನ್ನು ಉದ್ಯಮಗಳು ಅರ್ಥೈಸಿಕೊಳ್ಳಬೇಕು ಎಂದರು.
ಉದ್ಯಮದ ಕಠಿಣ ಸಮಯವನ್ನು ಗಮನಿಸಿದ ಕಿರ್ಲೋಸ್ಕರ್, ಎಲ್ಲ ಸಾಲಗಳ ಮರುಪಾವತಿಗಳಿಗೆ ನಿಷೇದ ಮತ್ತು ಬಡ್ಡಿದರಗಳನ್ನು ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ದ್ರವ್ಯತೆಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಅನ್ನು ಒತ್ತಾಯಿಸಿದ್ದಾರೆ.
ನಾವು ನಮ್ಮ ಸದಸ್ಯರನ್ನು ತಮ್ಮ ಸಿಬ್ಬಂದಿಯನ್ನು ಹಿಡಿದಿಟ್ಟುಕೊಳ್ಳುವಂತೆ ವಿನಂತಿಸುತ್ತಿದ್ದೇವೆ. ಸಾಧ್ಯವಾದಷ್ಟು ವಜಾಗೊಳಿಸುವುದನ್ನು ಕೈಬಿಡಬೇಕು. ಸಾಧ್ಯವಾದಷ್ಟು ಸಣ್ಣ ಸೇವಾ ಪೂರೈಕೆದಾರರನ್ನು ನೋಡಿಕೊಳ್ಳಿ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಸಾಂಕ್ರಾಮಿಕ ಸೋಂಕಿಗೆ ಉಳಿದ ಎಲ್ಲ ಉದ್ಯಮಗಳಿಗಿಂತ ವಾಯುಯಾನ ಕ್ಷೇತ್ರ ದೊಡ್ಡ ಹೊಡೆತ ಅನುಭವಿಸುತ್ತಿದೆ. ಗೋ-ಏರ್ ವೇತನ ರಹಿತ ರಜೆ ತೆಗೆದುಕೊಳ್ಳುವಂತೆ ತನ್ನ ನೌಕರರಿಗೆ ಸೂಚಿಸಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ನೌಕರರ ವೇತನದಲ್ಲಿ ಕಡಿತ ಘೋಷಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾ ಸಹ ಸಂಬಳ ಕಡಿತದ ಮೊರೆ ಹೋಗಿದೆ.