ಬೆಂಗಳೂರು: ಸಿಎಸ್ಐಆರ್- ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ (ಸಿಎಸ್ಐಆರ್-ಎನ್ಎಎಲ್) ಹಾಗೂ ಎಂಎಎಫ್ ಕ್ಲೋತಿಂಗ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ವೈದ್ಯರ ವೈಯಕ್ತಿಕ ಸುರಕ್ಷತಾ ನಿಲುವಂಗಿ ಅಭಿವೃದ್ಧಿಪಡಿಸಿವೆ.
ವೈದ್ಯರು ತಮ್ಮ ಜೀವಕ್ಕೆ ಎದುರಾಗುವ ಅಪಾಯವನ್ನೂ ಲೆಕ್ಕಿಸದೇ ಕೋವಿಡ್-19ರ ವಿರುದ್ಧ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರಿಗೆ ಹಲವು ಕಿರಿಯ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರು ಸಹ ಕೈಜೋಡಿಸಿದ್ದಾರೆ.
ವೈದ್ಯರ ವೈಯಕ್ತಿಕ ಸುರಕ್ಷತಾ ನಿಲುವಂಗಿ ವೈದ್ಯರ ಸುರಕ್ಷತೆ ಒದಗಿಸಲು ಲ್ಯಾಮಿನೇಟ್ ಮಾಡಲಾದ ಬಹು - ಪದರಗಳ ನೇಯ್ಗೆಯಿಂದ ಮಾಡಿದ ನಿಲುವಂಗಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ವೈದ್ಯಕೀಯ ಉಪಕರಣದಡಿ ಬಳಕೆಗೆ ಸುರಕ್ಷತಾ ಪ್ರಮಾಣೀಕರಣ ಸಹ ಪಡೆದಿದೆ. ಸಿಎಸ್ಐಆರ್-ಎನ್ಎಎಲ್ ಮತ್ತು ಎಂಎಎಫ್ ವಿಜ್ಞಾನಿಗಳು ಶ್ರಮಿಸಿ ದೇಶದಲ್ಲಿನ ಸೋಂಕು ನಿರೋಧಕ ನಿಲುವಂಗಿಗಳ ಕೊರತೆಯನ್ನು ಈ ಮೂಲಕ ತಗ್ಗಿಸಿದ್ದಾರೆ.
ಮುಖ್ಯ ವಿಜ್ಞಾನಿ ಡಾ. ಹರೀಶ್ ಸಿ ಬರ್ಸಿಲಿಯಾ ನೇತೃತ್ವದಲ್ಲಿ ವಿಜ್ಞಾನಿ ಡಾ. ಹೇಮಂತ್ ಕುಮಾರ್ ಶುಕ್ಲ ಮತ್ತು ಎಂಎಎಫ್ನ ಎಂ.ಜೆ. ವಿಜು ಅವರಿದ್ದ ತಜ್ಞರ ತಂಡ ದೇಶಿಯ ವಸ್ತುವಿನಿಂದ ನಿಲುವಂಗಿ ಅಭಿವೃದ್ಧಿಪಡಿಸಿದೆ. ಕೊಯಮತ್ತೂರಿನಲ್ಲಿ ಹಲವು ಕಠಿಣ ಪರೀಕ್ಷೆಗಳಿಗೆ ಒಳಪಟ್ಟ ನಂತರ ವೈದ್ಯಕೀಯ ಸೇವೆಗೆ ಬಳಸಲು ಯೋಗ್ಯ ಎಂಬ ಪ್ರಮಾಣೀಕರಣ ಪಡೆದಿದೆ.
ಮುಂದಿನ ನಾಲ್ಕು ವಾರಗಳ ಅವಧಿಯಲ್ಲಿ ನಿತ್ಯ 30 ಸಾವಿರ ನಿಲುವಂಗಿ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಇದರ ಪ್ರಮುಖ ಲಾಭವೆಂದರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ದರಕ್ಕಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದು ಎಂದು ಸಿಎಸ್ಐಆರ್-ಎನ್ಎಎಲ್ನ ನಿರ್ದೇಶಕ ಜಿತೇಂದ್ರ ಜೆ ಜಾಧವ್ ಹೇಳಿದರು.