ನವದೆಹಲಿ :ಕೊರೊನಾ ನಿಯಂತ್ರಣ ಚಟುವಟಿಕೆಗಳಿಗೆ ಕಾರ್ಪೊರೇಟ್ ವೆಚ್ಚವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿಯಲ್ಲಿ ಬರಲಿದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕೊರೊನಾ ಪೀಡಿತರ ಆರೈಕೆ, ವೈದ್ಯಕೀಯ ಆಮ್ಲಜನಕ ಉತ್ಪಾದನೆ, ಶೇಖರಣಾ ಘಟಕಗಳ ಸ್ಥಾಪನೆ, ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್‌ಗಳು, ಸಿಲಿಂಡರ್‌ಗಳು ಮತ್ತು ಇತರ ವೈದ್ಯಕೀಯ ಸಾಧನಗಳ ತಯಾರಿಕೆ ಹಾಗೂ ಪೂರೈಕೆಗಾಗಿ ಆರೋಗ್ಯ ಮೂಲಸೌಕರ್ಯಗಳ ವ್ಯವಸ್ಥೆ ಎಲ್ಲವೂ ಸಿಎಸ್‌ಆರ್ ಅಡಿಯಲ್ಲಿ ಬರಲಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಸದಾನಂದಗೌಡ ಅವರು ಇತ್ತೀಚೆಗೆ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಕೊರೊನಾ ವೈರಸ್ ವಿರುದ್ಧ ಹೋರಾಡಲು ತಮ್ಮದೇ ಆದ ಹಣದೊಂದಿಗೆ ಮುಂದೆ ಬರಬೇಕೆಂದು ಕರೆ ನೀಡಿದ್ದರು.
ಕಳೆದ ಏಪ್ರಿಲ್ ವೇಳೆಗೆ ಕೊರೊನಾ ಸಂತ್ರಸ್ತರ ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಖರ್ಚು ಮಾಡಿದ ಹಣವನ್ನು ಸಿಎಸ್ಆರ್ ಅಡಿಯಲ್ಲಿ ಪರಿಗಣಿಸಲಾಗುವುದು ಎಂದು ಕೇಂದ್ರ ಹೇಳಿತ್ತು.
ಮೊದಲ ಅಲೆಯ ಸಮಯದಲ್ಲಿ ಕೊರೊನಾ ಲಸಿಕೆ ಉತ್ಪಾದನೆ, ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ತಯಾರಿಕೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಗೆ ಬಳಸುವ ಹಣವನ್ನು ಸಿಎಸ್ಆರ್ ಅಡಿಯಲ್ಲಿ ಪರಿಗಣಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿತು.