ನವದೆಹಲಿ:ಅತಿದೊಡ್ಡ ಖಾಸಗೀಕರಣದ ನಿರ್ಧಾರ ತೆಗೆದುಕೊಂಡ ಕೇಂದ್ರ ಸಂಪುಟ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶಿಪ್ಪಿಂಗ್ ಸಂಸ್ಥೆ ಎಸ್‌ಸಿಐ ಮತ್ತು ಆನ್‌ಲ್ಯಾಂಡ್ ಕಾರ್ಗೋ ಮೂವರ್ ಕಾನ್ಕಾರ್ನಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಆಯ್ದ ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿನ ಶೇ 51ರಷ್ಟು ಷೇರುಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಆರ್ಥಿಕತೆ ಕುಂಠಿತಗೊಳಿಸುತ್ತಿರುವುದರಿಂದ ಆದಾಯ ಸಂಗ್ರಹಣೆ ಹೆಚ್ಚಿಸಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ಅದು ಸ್ಪಷ್ಟನೆ ನೀಡಿದೆ.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಸರ್ಕಾರದ ಸಂಪೂರ್ಣ ಶೇ 53.29 ಪಾಲುದಾರಿಕೆ ಮಾರಾಟ ಮಾಡಲು ಅನುಮೋದನೆ ನೀಡಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ರಿಫೈನರ್ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನಲ್ಲಿನ (ಬಿಪಿಸಿಎಲ್) ನಿರ್ವಹಣಾ ನಿಯಂತ್ರಣ ವರ್ಗಾವಣೆ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗಾರರಿಗೆ ತಿಳಿಸಿದರು.
ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿನ (ಎಸ್‌ಸಿಐ) ಶೇ 63.75 ರಷ್ಟು ಪಾಲನ್ನು ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿನ (ಕಾನ್‌ಕಾರ್) ಶೇ 30.9ರಷ್ಟು ಪಾಲನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ಕಾನ್ಕಾರ್ನಲ್ಲಿ ಸರ್ಕಾರದ ಪ್ರಸ್ತುತ ಪಾಲು ಶೇ 54.80ರಷ್ಟು ಹೊಂದಿದೆ. ಸರ್ಕಾರವು ತನ್ನ ಸಂಪೂರ್ಣ ಹಿಡಿತವನ್ನು ಟಿಎಚ್‌ಡಿಸಿ ಇಂಡಿಯಾ ಮತ್ತು ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪ್ ಲಿಮಿಟೆಡ್ನ (ನೀಪ್ಕೊ) ರಾಜ್ಯ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿ ಲಿಮಿಟೆಡ್‌ಗೆ ಮಾರಾಟ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.