ನವದೆಹಲಿ:ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಮತ್ತು ಮಹಾನಗರ ದೂರವಾಣಿ ನಿಗಮ ನಿಯಮಿತ (ಎಂಟಿಎನ್‌ಎಲ್)ದ ನೌಕರರಿಗೆ ಜುಲೈ ತಿಂಗಳ ವೇತನ ಇನ್ನೂ ಪಾವತಿ ಆಗಿಲ್ಲ.
ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್, ತನ್ನ 1.98 ಲಕ್ಷ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮಾಸಿಕದ ಒಟ್ಟು ವೇತನ ಪಾವತಿಯ ಮೊತ್ತ ಅಂದಾಜು 750ರಿಂದ 850 ಕೋಟಿ ರೂ. ದಾಟಲಿದೆ ಎಂದು ಹೇಳಲಾಗುತ್ತಿದೆ.
ಆಲ್ ಇಂಡಿಯಾ ಯೂನಿಯನ್ ಮತ್ತು ಭಾರತೀಯ ಸಂಚಾರ ನಿಗಮ ಲಿಮಿಟೆಡ್ ಸಂಘಟನೆಯ ಕನ್ವೀನರ್ ಪಿ.ಅಭಿಮನ್ಯು ಮಾತನಾಡಿ, ವೇತನ ಪಾವತಿಸುವ ಸಮಯದ ಬಗ್ಗೆ ಇದುವರೆಗೂ ಯಾವುದೇ ಭರವಸೆ ಬಂದಿಲ್ಲ. ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ದಿನದಂದು ಸಂಬಳ ಬರುತ್ತದೆ. ಜುಲೈ ತಿಂಗಳ ಸಂಬಳ ಉದ್ಯೋಗಿಗಳ ಖಾತೆ ಸೇರಿಲ್ಲ. ಅದು ಯಾವಾಗ ಬರುತ್ತದೆ ಎಂಬುದರ ಕುರಿತು ಯಾರೊಬ್ಬರಲ್ಲಿಯೂ ಖಚಿತ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಸ್ಎನ್ಎಲ್ನಲ್ಲಿ 1.76 ಲಕ್ಷ ಹಾಗೂ ಎಂಟಿಎನ್ಎಲ್ನಲ್ಲಿ ಸುಮಾರು 22,000 ಉದ್ಯೋಗಿಗಳು ಇದ್ದಾರೆ.