ಕರ್ನಾಟಕ

karnataka

ETV Bharat / business

ಜಿಯೋ-ಬಿಪಿ ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್ ಇಂಡಸ್ಟ್ರೀಸ್

ಆರ್‌ಬಿಎಂಎಲ್ ತನ್ನ ಪ್ರಸ್ತುತ 1,400ಕ್ಕೂ ಹೆಚ್ಚು ರೀಟೇಲ್ ಸೈಟ್‌ಗಳ ಇಂಧನದ ಚಿಲ್ಲರೆ ವ್ಯಾಪಾರ ಜಾಲವನ್ನು ಮುಂದಿನ ಐದು ವರ್ಷಗಳಲ್ಲಿ 5,500ರವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಈ ಕ್ಷಿಪ್ರ ಬೆಳವಣಿಗೆಗೆ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಅಗತ್ಯವಾಗಿದೆ..

By

Published : Jul 10, 2020, 10:01 PM IST

Reliance
ರಿಲಯನ್ಸ್

ಮುಂಬೈ :ಇಂಧನಗಳು ಮತ್ತು ಮೊಬಿಲಿಟಿಗಾಗಿ ತಮ್ಮ ಹೊಸ ಭಾರತೀಯ ಜಂಟಿ ಉದ್ಯಮ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ(ಆರ್‌ಬಿಎಂಎಲ್) ಪ್ರಾರಂಭವನ್ನು ಬಿಪಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಘೋಷಿಸಿವೆ.

2019ರ ಆರಂಭಿಕ ಒಪ್ಪಂದಗಳನ್ನು ಅನುಸರಿಸಿ, ಬಿಪಿ ಮತ್ತು ಆರ್‌ಐಎಲ್ ತಂಡಗಳು ಈ ವಹಿವಾಟನ್ನು ಪೂರ್ಣಗೊಳಿಸಲು ಕಳೆದ ಕೆಲವು ತಿಂಗಳುಗಳಿಂದ ಸವಾಲಿನ ವಾತಾವರಣದಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಈ ಜಂಟಿ ಉದ್ಯಮದಲ್ಲಿ ಶೇ.49ರಷ್ಟು ಪಾಲಿಗಾಗಿ ಬಿಪಿ 1 ಬಿಲಿಯನ್ ಡಾಲರ್​ಗಳನ್ನು ಆರ್‌ಐಎಲ್‌ಗೆ ಪಾವತಿಸಿದೆ ಮತ್ತು ಶೇ.51ರಷ್ಟು ಆರ್‌ಐಎಲ್ ವಶದಲ್ಲಿದೆ.

ಶಕ್ತಿ ಮತ್ತು ಮೊಬಿಲಿಟಿಗಾಗಿ ವೇಗವಾಗಿ ಬೆಳೆಯುತ್ತಿರುವ ಭಾರತದ ಬೇಡಿಕೆಗಳನ್ನು ಪೂರೈಸಲು ಈ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಬಿಪಿ ಮತ್ತು ಆರ್‌ಐಎಲ್ ನಿರೀಕ್ಷಿಸುತ್ತಿವೆ. ಮುಂದಿನ 20 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುವ ಇಂಧನ ಮಾರುಕಟ್ಟೆಯಾಗಲಿದೆಯೆಂದು ನಿರೀಕ್ಷಿಸಲಾಗಿದ್ದು, ಈ ಅವಧಿಯಲ್ಲಿ ದೇಶದ ಪ್ರಯಾಣಿಕ ಕಾರುಗಳ ಸಂಖ್ಯೆ ಸುಮಾರು ಆರು ಪಟ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಆರ್‌ಬಿಎಂಎಲ್ ತನ್ನ ಪ್ರಸ್ತುತ 1,400ಕ್ಕೂ ಹೆಚ್ಚು ರೀಟೇಲ್ ಸೈಟ್‌ಗಳ ಇಂಧನದ ಚಿಲ್ಲರೆ ವ್ಯಾಪಾರ ಜಾಲವನ್ನು ಮುಂದಿನ ಐದು ವರ್ಷಗಳಲ್ಲಿ 5,500ರವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಈ ಕ್ಷಿಪ್ರ ಬೆಳವಣಿಗೆಗೆ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಅಗತ್ಯವಾಗಿದೆ. ಆ ಸಂಖ್ಯೆ ಈ ಅವಧಿಯಲ್ಲಿ 20,000ದಿಂದ 80,000ಕ್ಕೆ ಬೆಳೆಯಲಿದೆ. ಈ ಜಂಟಿ ಉದ್ಯಮವು ಮುಂಬರುವ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು 30ರಿಂದ 45 ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನೂ ಇಟ್ಟುಕೊಂಡಿದೆ.

ಪಾಲುದಾರಿಕೆ ಕುರಿತು ಪ್ರತಿಕ್ರಿಯೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ರೀಟೇಲ್ ಮತ್ತು ವಾಯುಯಾನ ಇಂಧನಗಳಲ್ಲಿ ಭಾರತದಾದ್ಯಂತ ಉಪಸ್ಥಿತಿಯನ್ನು ಸ್ಥಾಪಿಸಲು ಬಿಪಿ ಜೊತೆಗಿನ ಸದೃಢ ಮತ್ತು ಮೌಲ್ಯಯುತ ಪಾಲುದಾರಿಕೆಯನ್ನು ರಿಲಯನ್ಸ್ ವಿಸ್ತರಿಸುತ್ತಿದೆ. ಮೊಬಿಲಿಟಿ ಮತ್ತು ಲೋ ಕಾರ್ಬನ್ ಸಲ್ಯೂಶನ್‌ಗಳಲ್ಲಿ ನಾಯಕತ್ವ ಸ್ಥಾನ ಪಡೆಯುವ ಗುರಿ ಹೊಂದಿರುವ ಆರ್‌ಬಿಎಂಎಲ್, ಡಿಜಿಟಲ್ ಹಾಗೂ ತಂತ್ರಜ್ಞಾನವನ್ನು ನಮ್ಮ ಶಕ್ತಿಯನ್ನಾಗಿಟ್ಟುಕೊಂಡು ಭಾರತೀಯ ಗ್ರಾಹಕರಿಗೆ ಸ್ವಚ್ಛ ಮತ್ತು ಕೈಗೆಟುಕುವ ಆಯ್ಕೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

ಬಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬರ್ನಾರ್ಡ್‌ ಲೂನಿ, “ಡಿಜಿಟಲ್ ತಂತ್ರಜ್ಞಾನ, ವ್ಯಾಲ್ಯೂ ಇಂಜಿನಿಯರಿಂಗ್ ಮತ್ತು ಹೊಸ ಇಂಧನ ಪರಿಹಾರಗಳಲ್ಲಿ ಭಾರತವು ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆ ಸಾಧಿಸುತ್ತಿದೆ. ಇದು ತನ್ನ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುವ ದೇಶವಾಗಿದ್ದು, ಅದು ಅಭಿವೃದ್ಧಿ ಹೊಂದುತ್ತಿದ್ದಂತೆ, ಮೊಬಿಲಿಟಿ ಮತ್ತು ಅನುಕೂಲಕ್ಕಾಗಿ ಅದರ ಅಗತ್ಯಗಳು ಇನ್ನಷ್ಟು ಹೆಚ್ಚಲಿವೆ. ಬಿಪಿಗೆ ಭಾರತದಲ್ಲಿ ಒಂದು ಶತಮಾನದಷ್ಟು ಅವಧಿಯ ಹೆಮ್ಮೆಯ ಇತಿಹಾಸವಿದೆ.

ಭಾರತದ ಅತ್ಯಮೂಲ್ಯ ಕಂಪನಿಯಾದ ರಿಲಯನ್ಸ್‌ನೊಂದಿಗೆ ಕಾರ್ಯತಂತ್ರದ ಪಾಲುದಾರರಾಗಿರುವುದನ್ನು ನಾವು ಗೌರವಿಸುತ್ತೇವೆ ಮತ್ತು ಕಳೆದ ಒಂದು ದಶಕದಲ್ಲಿ ನಮ್ಮ ಪಾಲುದಾರಿಕೆ ಸಾರ ಮತ್ತು ಚೈತನ್ಯಗಳೆರಡರಲ್ಲೂ ಬೆಳೆದಿದೆ ಎಂದು ಸಂತೋಷಪಡುತ್ತೇವೆ. ರಿಲಯನ್ಸ್‌ನ ಡಿಜಿಟಲ್ ಸಾಮರ್ಥ್ಯಗಳು, ತಾಂತ್ರಿಕ ಪರಿಣತಿ ಮತ್ತು ವ್ಯಾಪ್ತಿಯು ನಮ್ಮ ಅಂತರರಾಷ್ಟ್ರೀಯ ಇಂಧನಗಳು ಮತ್ತು ಸೇವಾ ಕೊಡುಗೆಗಳಿಗೆ ಪೂರಕವಾಗಿದೆ. ಇಂದಿನ ಘೋಷಣೆಯು ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸುವ ನಮ್ಮ ಸಾಮಾನ್ಯ ಗುರಿಯ ಮತ್ತೊಂದು ಮೈಲಿಗಲ್ಲು.

ಈ ಹೊಸ ಉದ್ಯಮವು ಭಾರತದ ಬೇಡಿಕೆಗಳನ್ನು ಈಡೇರಿಸಲು ಮತ್ತು ಭವಿಷ್ಯಕ್ಕಾಗಿ ಅತ್ಯಾಕರ್ಷಕ ಹೊಸ ಡಿಜಿಟಲ್ ಮತ್ತು ಲೋ-ಕಾರ್ಬನ್ ಆಯ್ಕೆಗಳನ್ನು ರೂಪಿಸಲು ಸಹಾಯ ಮಾಡುವಂತಹ ಪ್ರಮುಖ, ವೇಗವಾಗಿ ಬೆಳೆಯುವ ವಹಿವಾಟನ್ನು ನಿರ್ಮಿಸುವ ಅನನ್ಯ ಅವಕಾಶವಾಗಿದೆ ಎಂದು ಹೇಳಿದ್ದಾರೆ. ಸಂಸ್ಥೆಗಳ ನಿವ್ವಳ ಶೂನ್ಯ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಈ ಹೊಸ ಜಂಟಿ ಉದ್ಯಮವು ಭಾರತೀಯ ಗ್ರಾಹಕರಿಗೆ ಕಡಿಮೆ ಹೊರಸೂಸುವಿಕೆಯ ಅತ್ಯಾಧುನಿಕ ಇಂಧನಗಳು, ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮತ್ತು ಇತರ ಲೋ ಕಾರ್ಬನ್ ಸಲ್ಯೂಶನ್‌ಗಳನ್ನು ಕಾಲಕ್ರಮೇಣ ಒದಗಿಸಲು ಬಯಸುತ್ತದೆ. ತನ್ನ ಹಾಗೂ ತನ್ನ ವಿಸ್ತೃತ ಇಕೋಸಿಸ್ಟಂ‌ನ ಕಾರ್ಯಾಚರಣೆಗಳ ಡಿಕಾರ್ಬನೈಸೇಶನ್‌ಗೂ ಆರ್‌ಬಿಎಂಎಲ್ ಬದ್ಧವಾಗಿದೆ.

ನಿಯಂತ್ರಕರ ಮತ್ತು ಶಾಸನಬದ್ಧವಾದ ಅಗತ್ಯ ಅನುಮೋದನೆಗಳ ಪೈಕಿ ಸಾರಿಗೆ ಇಂಧನಗಳಿಗೆ ಮಾರ್ಕೆಟಿಂಗ್ ದೃಢೀಕರಣವನ್ನು ಆರ್‌ಬಿಎಂಎಲ್ ಪಡೆದುಕೊಂಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಜಂಟಿ ಉದ್ಯಮವು ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನಗಳು ಮತ್ತು ಕ್ಯಾಸ್ಟ್ರಾಲ್ ಲೂಬ್ರಿಕೆಂಟ್‌ಗಳ ಮಾರಾಟವನ್ನು ಪ್ರಾರಂಭಿಸಲಿದ್ದು, ಈ ಮಳಿಗೆಗಳನ್ನು ಇಷ್ಟರಲ್ಲೇ “ಜಿಯೋ-ಬಿಪಿ” ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ABOUT THE AUTHOR

...view details