ಬೆಂಗಳೂರು:ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಠಿಣ ಸ್ಪರ್ಧೆಯೊಡ್ಡಲು ಸಜ್ಜಾಗುತ್ತಿದ್ದು, ಈ ಹಿಂದಿನ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಡೇಟಾ ಸೇವೆ ನೀಡಲಿದೆ.
ಅಗ್ಗದ ದರದಲ್ಲಿ ಡೇಟಾ ಸೇವೆ ನೀಡಲು ಸಿಲಿಕಾನ್ ಸಿಟಿ ಮೂಲದ ಸ್ಟಾರ್ಟ್ಅಪ್ ಕಂಪನಿ 'ವೈಫೈ ಡಬ್ಬಾ' ಮುಂದೆ ಬಂದಿದ್ದು, 1 ರೂ. ದರದಲ್ಲಿ 1 ಜಿಬಿ ಡೇಟಾ ನೀಡಲಿದೆ ಎಂಬ ಸುಳಿವು ಸಹ ನೀಡಿದೆ. ಜಿಯೋದಿಂದಾಗಿ ಕಡಿಮೆ ಬೆಲೆಯಲ್ಲಿ ಅಂತರ್ಜಾಲ ಸೇವೆ ಲಭ್ಯವಾಗಿದ್ದರೂ ಅನೇಕ ಬಳಕೆದಾರರಿಗೆ ವೇಗದ ನೆಟ್ವರ್ಕ್ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡು 'ವೈಫೈ ಡಬ್ಬಾ' ಡೇಟಾ ಸೇವೆಗೆ ಪದಾರ್ಪಣೆ ಮಾಡುತ್ತಿದೆ.
ಮೂರನೇ ಮಧ್ಯವರ್ತಿಯಂತಹ ತಂತ್ರಾಂಶ, ಸಾಫ್ಟ್‌ವೇರ್ ಅಥವಾ ಮೂಲಸೌಕರ್ಯಗಳನ್ನು ನಿಯೋಜಿಸುವ ಮೂಲಕ ವೈಫೈ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ವೈಫೈ ಡಬ್ಬಾ ಸ್ಟಾರ್ಟ್ಅಪ್ ತನ್ನದೆಯಾದ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ನೆಟ್‌ವರ್ಕಿಂಗ್ ಸಿಸ್ಟಮ್ ಹೊಂದಿದ್ದು, ಕಡಿಮೆ ಶುಲ್ಕದಲ್ಲಿ ಡೇಟಾ ಸೇವೆ ನೀಡಲಿದೆ.
ವೈಫೈ ಡಬ್ಬಾ ಸೇವೆ ಯಾರು ಬಳಸಬಹುದು?
ವೈಫೈ ಡಬ್ಬಾ ಭಾರತದಲ್ಲಿ ಇನ್ನೂ ತನ್ನ ಸೇವೆಗಳನ್ನು ಆರಂಭಿಸದಿದ್ದರೂ ಕಂಪನಿಯು ಪ್ರಥಮ ಬಾರಿಗೆ ಬೆಂಗಳೂನಲ್ಲಿ ಕಾರ್ಯಾರಂಭ ಮಾಡಲಿದೆ. ಬೇಡಿಕೆಗೆ ಅನುಗುಣವಾಗಿ ದೇಶದ ಇತರ ನಗರಗಳಿಗೆ ವಿಸ್ತರಿಸಲಿದೆ. ಯಾವುದೇ ಬಳಕೆದಾರರು ವೈಫೈ ಡಬ್ಬಾ ಸಿಗ್ನಲ್‌ಗೆ ಸುಲಭವಾಗಿ ಸಂಪರ್ಕ ಹೊಂದಬಹುದು. ಆಸಕ್ತರು ಮೊಬೈಲ್ ಸಂಖ್ಯೆ ಮತ್ತು ಒಟಿಪಿಯೊಂದಿಗೆ ಲಾಗಿನ್ ಆಗಬಹುದು.