ಸಿಡ್ನಿ: ಇಲ್ಲಿನ ಸಿಡ್ನಿ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಹನುಮ ವಿಹಾರಿ ಮತ್ತು ಆರ್. ಅಶ್ವಿನ್ ಜೋಡಿಯ ಸಮಯೋಚಿತ ಬ್ಯಾಟಿಂಗ್ ಭಾರತವನ್ನು ಸೋಲಿನಿಂದ ಪಾರು ಮಾಡಿತು.
ಭಾರತದ ಬ್ಯಾಟಿಂಗ್ ಪಡೆಯನ್ನು ಪ್ರಶಂಸಿಸಿದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ, ಇದು ಭಾರತ ತಂಡದ ಡ್ರಾ ಅಲ್ಲ. ಇದೊಂದು ಗೆಲುವು ಎಂದು ಬಣ್ಣಿಸಿದ್ದಾರೆ.
ಇದು ಡ್ರಾ ಅಲ್ಲ ಇದೊಂದು ಗೆಲುವು.... ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೋಡೆಯಂತೆ ತಡೆ ಹಿಡಿದು ನಿಂತಿತು. ಶಹಬ್ಬಾಸ್ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.
ಎಂತಹ ಅದ್ಭುತ ಮತ್ತು ಎಂತಹ ನಿರ್ಣಯ. ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಸ್ಥಿರತೆಯ ಮನೋಭಾವ ತೋರಿದೆ. ಇದು ನವ ಭಾರತ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬಣ್ಣಿಸಿದರು.
5ನೇ ದಿನದ ಆರಂಭದಲ್ಲಿ ರಹಾನೆ ವಿಕೆಟ್ ಬೀಳುತ್ತಿದ್ದಂತೆ ರಿಷಭ್ ಪಂತ್ ಮತ್ತು ಪೂಜಾರ ಜೋಡಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿತ್ತು. ಈ ಇಬ್ಬರು ಆಟಗಾರರ ನಿರ್ಗಮನದ ನಂತರ ಪಂದ್ಯ ಆಸೀಸ್ನತ್ತ ವಾಲಿತ್ತು. ಗಾಯದ ನಡುವೆಯೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಮತ್ತು ಆರ್. ಆಶ್ವಿನ್ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.
6ನೇ ವಿಕೆಟ್ಗೆ ವಿಹಾರಿ ಮತ್ತು ಅಶ್ವಿನ್ ಜೋಡಿ 259 ಬಾಲ್ ಎದುರಿಸಿ 62 ರನ್ ಕಲೆಹಾಕಿತು. 161 ಬಾಲ್ ಎದುರಿಸಿದ ವಿಹಾರಿ 23 ರನ್ ಗಳಿಸಿದರೇ 128 ಬಾಲ್ ಎದುರಿಸಿದ ಅಶ್ವಿನ್ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ 4 ಪಂದ್ಯದಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿವೆ.