ನವದೆಹಲಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ನಿಲುವಿಗಾಗಿ ಆನಂದ್ ಮಹೀಂದ್ರ ಅವರು ಪ್ರಶಂಸಿದ್ದಾರೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕಂದರೆ, ನಾಡೆಲ್ಲಾ ಅವರಿಗೆ ಶಹಬಾಸ್‌ಗಿರಿ ಕೊಟ್ಟಿದ್ದು ಹವಾಮಾನ ಬದಲಾವಣೆಯನ್ನು ಎದುರಿಸಲು ಮೈಕ್ರೋಸಾಫ್ಟ್ ಕಂಪನಿ ತೆಗೆದುಕೊಂಡ ಪ್ರತಿಜ್ಞೆಗೆ.
ನಮ್ಮ ಕಾರ್ಯಗಳು ಮತ್ತು ನಾವು ನಿರ್ಮಿಸುವ ಉತ್ಪನ್ನಗಳು ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಹಾಗು ನಮ್ಮ ಗ್ರಹಕ್ಕೂ ಅನ್ವಯವಾಗುತ್ತದೆ. ಈ ನಿಟ್ಟಿನಲ್ಲಿ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿಯೇ ನಾವಂದು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಹೊಸ ಬದ್ಧತೆಗಳಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ತಮ್ಮ ಬ್ಲಾಗ್ನಲ್ಲಿ 'ಮೈಕ್ರೋಸಾಫ್ಟ್ 2030ರ ವೇಳೆಗೆ ಕಾರ್ಬನ್ ನೆಗೆಟಿವ್' ಶೀರ್ಷಿಕೆಯಡಿ ಹವಾಮಾನ ಬದಲಾವಣೆ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು.
ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರ, "ಬ್ರಾವೋ (ಶಹಬಾಸ್) ಸತ್ಯ ನಾಡೆಲ್ಲಾ. ನಾನು ಮಹೀಂದ್ರರೈಸ್ ಅನ್ನು 2040ರ ವೇಳೆಗೆ ಇಂಗಾಲ ತಟಸ್ಥವಾಗಿಸುವ ಉದ್ದೇಶವನ್ನು ಘೋಷಿಸಿದ್ದೇನೆ. ನಮ್ಮ ಗಡುವುಗಿಂತ 10 ವರ್ಷ ಮುಂಚಿತವಾಗಿ ಸಾಧಿಸುವ ಘೋಷಣೆಯನ್ನು ನೀವು ಮಾಡಿದ್ದೀರಾ. ನಾವು ನಿಮ್ಮನ್ನು ಧೈರ್ಯಶಾಲಿಗಳೆಂದು ಭಾವಿಸಿದ್ದೇವೆ. ನೀವು ನಮ್ಮೆಲ್ಲರಲ್ಲೂ ಜವಾಬ್ದಾರಿ ಹೆಚ್ಚಿಸಿದ್ದೀರಿ" ಎಂದು ಟ್ವೀಟ್ ಮಾಡಿದ್ದಾರೆ.
ಮೈಕ್ರೋಸಾಫ್ಟ್ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಸುದ್ದಿಸಂಸ್ಥೆಯ ಸಂಪಾದಕರೊಂದಿಗೆ ಮಾತನಾಡಿದ್ದ ಸತ್ಯ ನಾಡೆಲ್ಲಾ 'ವಿವಾದಾತ್ಮಕ ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ. ಬಾಂಗ್ಲಾ ವಲಸಿಗರು ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿ ಮುನ್ನಡೆಸುವುದನ್ನು ನಾನು ಇಷ್ಟಪಡುತ್ತೇನೆ' ಎಂದು ಹೇಳಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಆನಂದ ಮಹೀಂದ್ರ ಅವರು ಈ ಬಗ್ಗೆ ಏನನ್ನೂ ಹೇಳದೆ, ಇಂಗಾಲ ತಗ್ಗಿಸುವ ಬಗ್ಗೆ ಅವರು ತೆಗೆದುಕೊಂಡು ನಿರ್ಧಾರವನ್ನು ಪ್ರಶಂಸಿಸಿದ್ದಾರೆ.