ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ದೈತ್ಯರು ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಶೇ 80ರಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಉದ್ಯಮಗಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಹಾಗೂ ವಿತರಣಾ ಹುಡುಗರಂತಹ (ಡೆಲಿವರ್ ಬಾಯ್) ಉದ್ಯೋಗಗಳನ್ನು ಮಾತ್ರ ಸೃಷ್ಟಿ ಮಾಡುತ್ತಿವೆ ಎಂಬ ಆಪಾದನೆ ಕೇಳಿಬಂದಿದೆ.
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ವ್ಯವಹಾರ ಮಾದರಿಗಳಿಂದ ತಯಾರಕರು ಅಥವಾ ವ್ಯಾಪಾರಿಗಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಹೆಚ್ಚಾಗಿ ಚೀನಾ ಮತ್ತು ಕೊರಿಯಾದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಾರೆ. ಇದರಲ್ಲಿ ಶೇ 80ರಷ್ಟು ಉತ್ಪನ್ನಗಳು ಹೊರಗಿನಿಂದ ಬರುತ್ತಿವೆ ಎಂದು ಭಾರತದ ಅತಿಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಒಕ್ಕೂಟ (FISME) ಪ್ರಧಾನ ಕಾರ್ಯದರ್ಶಿ ಅನಿಲ್ ಭರದ್ವಾಜ್ ಆರೋಪಿಸಿದ್ದಾರೆ.