ನವದೆಹಲಿ : ಟೆಲಿಕಾಂ ಆಪರೇಟರ್‌ಗಳು ಪಾವತಿಸಬೇಕಾದ ಶಾಸನಬದ್ಧ ಬಾಕಿಗಳ ಸ್ಥಿತಿಗತಿ ಕುರಿತು ದೂರು ಸಂಪರ್ಕ ಇಲಾಖೆ (ಡಿಒಟಿ) ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಸೇರಿ ಟೆಲಿಕಾಂ ಆಪರೇಟರ್‌ಗಳು ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ 2021ರ ಮಾರ್ಚ್ 31ರೊಳಗೆ ಟೆಲಿಕಾಂ ಇಲಾಖೆಗೆ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್)ದ ಶೇ.10ರಷ್ಟು ಪಾವತಿಸಬೇಕಾಗಿತ್ತು. ಟೆಲಿಕಾಂ ಆಪರೇಟರ್‌ಗಳು ಪಾವತಿಸದ ಹಿನ್ನೆಲೆ ಎಜಿಆರ್ ಪಾವತಿಗಳ ಸ್ಥಿತಿಗತಿ ಕುರಿತು ದೂರ ಸಂಪರ್ಕ ಇಲಾಖೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಲಿಕಾಂ ಕಂಪನಿಗಳು ಮತ್ತು ಕೇಂದ್ರದ ನಡುವಿನ 17 ವರ್ಷಗಳಿಗಿಂತ ಹೆಚ್ಚು ಕಾಲದ ಕಾನೂನು ಹೋರಾಟದ ಕುರಿತು ಕಳೆದ ಸೆಪ್ಟೆಂಬರ್ನಲ್ಲಿ ತನ್ನ ತೀರ್ಪನ್ನು ನೀಡಿದ್ದ ಸುಪ್ರೀಂಕೋರ್ಟ್, ಟೆಲಿಕಾಂ ಕಂಪೆನಿಗಳು 2021 ರ ಮಾರ್ಚ್ 31ರೊಳಗೆ ತಮ್ಮ ಎಜಿಆರ್ ಬಾಕಿ ಹಣದ ಮುಂಗಡವಾಗಿ ಶೇ.10ರಷ್ಟು ಹಣವನ್ನು ನೀಡುವಂತೆ ನಿರ್ದೇಶಿಸಿತ್ತು. ಉಳಿದದ್ದನ್ನು ಏಪ್ರಿಲ್ 1, 2021 ರಿಂದ ಹತ್ತು ವರ್ಷಗಳ ಅವಧಿಯಲ್ಲಿ ಪಾವತಿಸುವಂತೆ ಸೂಚಿಸಿತ್ತು.
ಆದರೆ, ನ್ಯಾಯಾಲಯದ ಆದೇಶದ ಬಗ್ಗೆ ಕೆಲವು ಅಸ್ಪಷ್ಟತೆ ಇದ್ದು, ನಾವು ಈಗಾಗಲೇ ಶೇ.10ರಷ್ಟು ಹಣ ಪಾವತಿಸಿದ್ದೇವೆ ಎಂದು ಟೆಲಿಕಾಂ ಕಂಪನಿಗಳು ತಿಳಿಸಿವೆ. ಆದರೆ, ಈಗಾಗಲೇ ಪಾವತಿಸಿರುವುದನ್ನು ಲೆಕ್ಕಿಸದೆ ಮಾರ್ಚ್ 31ರ ಒಳಗೆ ಶೇ.10ರಷ್ಟು ಮುಂಗಡ ಹಣ ಪಾವತಿಸುವಂತೆ ತಿಳಿಸಿತ್ತು. ಹಾಗಾಗಿ, ಕೆಲ ಕಂಪನಿಗಳು ಹಣ ಪಾವತಿಸಿದ್ದು, ಇನ್ನೂ ಕೆಲವು ಪಾವತಿಸಿಲ್ಲ. ಈ ಬಗ್ಗೆ ದೂರು ಸಂಪರ್ಕ ಇಲಾಖೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.