ಜೈಸಲ್ಮರ್:ನಿನ್ನೆಯಷ್ಟೇ ಮಾರುತಿ ಸುಜುಕಿ ತನ್ನ ವಾಹನಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲೇ ಟಾಟಾ ಮೋಟಾರ್ಸ್ ಸಹ ಪ್ರಯಾಣಿಕ ವಾಹನಗಳ ದರ ಹೆಚ್ಚಿಸುವುದಾಗಿ ತಿಳಿಸಿದೆ.
ನೂತನ ಬಿಎಸ್-6 ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್ಅನ್ನು ಮೇಲ್ದರ್ಜೆಗೆ ಏರಿಸುತ್ತಿರುವುದರಿಂದ 2020ರ ಜನವರಿ ತಿಂಗಳಿಂದ ಪ್ರಯಾಣಿಕ ವಾಹನಗಳ ದರದಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಕಂಪನಿಯು ಪ್ರಸ್ತುತ ಟಿಯಾಗೋ ಉತ್ಪನ್ನದಿಂದ ಎಸ್ಯುವಿ ಕಾರುಗಳವರೆಗೆ ₹ 4.39 ಲಕ್ಷದಿಂದ ₹ 16.85 ಲಕ್ಷದಲ್ಲಿ (ದೆಹಲಿ ಎಕ್ಸ್ ಶೋ ರೂಮ್) ಮಾರಾಟ ಆಗುತ್ತಿವೆ. ಈ ಶ್ರೇಣಿಯ ಎಲ್ಲ ಕಾರುಗಳ ದರ ಏರಿಕೆಯಾಗುತ್ತಿದೆ. ಗ್ರಾಹಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.
ಬಿಎಸ್-6 ಮಾನದಂಡ ಅನುಷ್ಠಾನಕ್ಕೆ ಬರುತ್ತಿರುವುದರಿಂದ ಜನವರಿಯಿಂದ ಬೆಲೆಗಳು ಹೆಚ್ಚಾಗಲಿವೆ. ಕಂಪನಿ ತೆಗೆದುಕೊಂಡ ಹಿಂದಿನ ಬೆಲೆ ಪರಿಷ್ಕರಣೆಗೆ ಹೋಲಿಸಿದರೆ ಯಾವುದೇ ಬದಲಾವಣೆ ಸಂಭವಿಸಿದಲ್ಲಿ ದರದಲ್ಲಿ ₹10,000-15,000 ವರೆಗೆ ಹೆಚ್ಚಳ ಆಗಬಹುದು ಎಂದು ಟಾಟಾ ಮೋಟಾರ್ಸ್ನ ಪ್ರಯಾಣಿಕ ವಾಹನಗಳ ವ್ಯವಹಾರಿಕ ವಿಭಾಗದ ಅಧ್ಯಕ್ಷ ಮಾಯಾಂಕ್ ಪರೀಕ್ ಹೇಳಿದರು.