ನವದೆಹಲಿ: ಕೊರೊನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಬಡವರು ಎದುರಿಸುತ್ತಿರುವ ಕಷ್ಟವನ್ನು ದೂರಮಾಡುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ) ಅಡಿ ಯೋಜನೆಯೊಂದನ್ನು ಘೋಷಿಸಿದೆ.
ಎಂ ಪಿಎಂಜಿಕೆಎವೈ ಅಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಆಹಾರ ನಿಗಮದಿಂದ 31.80 ಲಕ್ಷ ಮೆಟ್ರಿಕ್ ಟನ್ ಉಚಿತ ಆಹಾರಧಾನ್ಯ ಪೂರೈಕೆ
ಭಾರತೀಯ ಆಹಾರ ನಿಗಮ (ಎಫ್ಸಿಐ) ಗೋದಾಮುಗಳಿಂದ 2021ರ ಮೇ 17ರವರೆಗೆ ಎಲ್ಲ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 31.80 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಎತ್ತುವಳಿ ಮಾಡಿದೆ. ಲಕ್ಷದ್ವೀಪ 2021ರ ಮೇ ಮತ್ತು ಜೂನ್ ತಿಂಗಳ ಸಂಪೂರ್ಣ ಹಂಚಿಕೆ ಪಡೆದಿದೆ. ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲಪ್ರದೇಶ, ಗೋವಾ, ಛತ್ತೀಸ್ಗಢ, ಹಿಮಾಚಲಪ್ರದೇಶ, ಕೇರಳ, ಲಡಾಖ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೆರಿ, ತಮಿಳುನಾಡು, ತೆಲಂಗಾಣ ಮತ್ತು ತ್ರಿಪುರ 2021ರ ಮೇ ತಿಂಗಳ ಶೇ.100ರಷ್ಟು ಹಂಚಿಕೆ ಎತ್ತುವಳಿ ಮಾಡಿವೆ.
ಇದನ್ನೂ ಓದಿ: ಆಕ್ಸಿಜನ್ ಎಕ್ಸ್ಪ್ರೆಸ್: ಒಂದೇ ದಿನದಲ್ಲಿ 1,000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಸಾಗಣೆ
ಪಿಎಂಜಿಕೆಎವೈ ಅಡಿ ಉಚಿತ ಆಹಾರಧಾನ್ಯ ವಿತರಣೆಗಾಗಿ ಕಾಲಮಿತಿಯಲ್ಲಿ ಆಹಾರ ಧಾನ್ಯ ಎತ್ತುವಳಿ ಮಾಡಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗೃತಿ ಮೂಡಿಸಲಾಗಿದೆ.
ಈ ಯೋಜನೆ ಅಡಿ ಎನ್ಎಫ್ಎಸ್ಎ ವ್ಯಾಪ್ತಿಯಲ್ಲಿ ಒಳಪಡುವ ಅಂದಾಜು 79.39 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳು, ಅಂದರೆ, 2021ರ ಮೇ-ಜೂನ್ನಲ್ಲಿ ಹೆಚ್ಚುವರಿಯಾಗಿ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ. ಆಹಾರಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು. ಈ ಹಂಚಿಕೆ ಈಗಾಗಲೇ ಎನ್ಎಫ್ಎಸ್ಎ ಅಡಿ ನೀಡಲಾಗುತ್ತಿರುವ ಆಹಾರಧಾನ್ಯಗಳ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುವುದು. ಈ ಯೋಜನೆಯಡಿ ವಿತರಣೆಗಾಗಿ 79.39 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಹಂಚಿಕೆ ಮಾಡಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ನೆರವಿನ ಭಾಗವಾಗಿ ಆಹಾರಧಾನ್ಯಗಳು, ಅಂತಾರಾಜ್ಯ ಸಾಗಾಣೆ ವೆಚ್ಚ ಇತ್ಯಾದಿ ಸೇರಿ ತಗುಲುವ ಒಟ್ಟು 26,000 ಕೋಟಿ ರೂ. ವೆಚ್ಚವನ್ನು ಸಹ ಕೇಂದ್ರ ಸರ್ಕಾರ ಭರಿಸಲಿದೆ.