ನವದೆಹಲಿ :ಮಹೀಂದ್ರಾ ಸಮೂಹವು ಕೋವಿಡ್-19 ಬಿಕ್ಕಟ್ಟಿನಿಂದ ಸದೃಢವಾಗಿ ಹೊರ ಬಂದಿದೆ. ವಿಚಿತ್ರ ಮತ್ತು ಕೆಟ್ಟದಾದ 2020ರ ವರ್ಷವು 2021ರಲ್ಲಿ 'ಮರುಶೋಧನೆ ಮತ್ತು ಪುನರುತ್ಪಾದನೆಯ' ವರ್ಷವಾಗಿ ಪರಿವರ್ತಿಸಲಾಗುವುದು ಎಂದು ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
100 ರಾಷ್ಟ್ರಗಳ 2.56 ಲಕ್ಷ ಉದ್ಯೋಗಿಗಳನ್ನು ಉದ್ದೇಶಿಸಿ ಹೊಸ ವರ್ಷ ಭಾಷಣ ಮಾಡಿದ ಆನಂದ್ ಮಹೀಂದ್ರಾ, ಕಳೆದ ವರ್ಷ ಸಾಂಕ್ರಾಮಿಕ ರೋಗ ತಂದೊಡ್ಡಿದ ಎಲ್ಲಾ ಸಮಸ್ಯೆಗಳ ನಡುವೆಯೂ ಅನಿರೀಕ್ಷಿತವಾಗಿ ದೊಡ್ಡ ಸಂಗತಿಗಳು ಹೊರಹೊಮ್ಮಿವೆ ಎಂದು ಹೇಳಿದರು.
ಕೋವಿಡ್ ಲಸಿಕೆ ಅಭಿವೃದ್ಧಿಗಳು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸಂಶೋಧಕರು ಮತ್ತು ನಿಯಂತ್ರಕರು ಕೋವಿಡ್ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗವಾಗಿ 10 ತಿಂಗಳಲ್ಲಿ ಕೈಗೊಂಡಿದ್ದಾರೆ. ಅವರ ಶ್ರಮ ಇಲ್ಲದಿದ್ದರೆ 10 ವರ್ಷಗಳು ಬೇಕಾಗುತ್ತವೆ. ಇದರಿಂದ ಕಲಿಯಬೇಕಾದ ಸಾಲಷ್ಟು ಪಾಠಗಳಿವೆ. ಅದರಲ್ಲ ಮುಖ್ಯವಾಗಿ ವ್ಯಾಪಾರ ಚಾಲನೆ, ಮರುಸಜ್ಜು ಮತ್ತು ಮರು ಮೌಲ್ಯಮಾಪನದಂತಹ ಅಂಶಗಳಿವೆ ಎಂದರು.
ಇದರ ಮುಖ್ಯವಾದ ಪಾಠವೆಂದರೆ ವೈದ್ಯಕೀಯ ವಿಜ್ಞಾನವು ತನ್ನ ಸಾಂಪ್ರದಾಯಿಕ ವಿಧಾನವನ್ನು ತ್ಯಜಿಸಿ, ಕೋವಿಡ್-19ನ ಹೊಸ ಸಮಸ್ಯೆ ನಿಭಾಯಿಸಲು ಮರುಸಜ್ಜಾಗುವ ಮೂಲಕ ತ್ವರಿತವಾಗಿ ಸಂಶೋಧನಾ ಪ್ರಕ್ರಿಯೆಗಳನ್ನು ಪುನರ್ರಚಿಸಿತು. ಇತ್ತೀಚಿನ ತಂತ್ರಜ್ಞಾನ ಬಳಸಿ ಅನಗತ್ಯ ಸಮಯ ಕಡಿತಗೊಳಿಸಿತು. ಇದು ತ್ವರಿತ ರೀಬೂಟ್‌ನ ಶಕ್ತಿಯಾಗಿದೆ ಎಂದರು.