ನವದೆಹಲಿ: ಮೇ ಮತ್ತು ಜೂನ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ತೈಲ ಮಾರುಕಟ್ಟೆ ಕಂಪನಿಗಳು ವಿಷಮ ಪರಿಸ್ಥಿತಿಯಿಂದ ಹೊರಬರುತ್ತಿರುವಂತೆ ಕಾಣುತ್ತಿದೆ.
ಕೋವಿಡ್-19 ಹಬ್ಬುವಿಕೆ ನಿಯಂತ್ರಿಸಲು ವಿಧಿಸಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಭಾರತ ಕ್ರಮೇಣ ಅನ್ಲಾಕ್ನತ್ತ ಹೊರಳುತ್ತಿದ್ದಂತೆ ತೈಲ ಬೇಡಿಕೆಯ ರೇಖೆ ಮೇಲ್ಮುಖವಾಗಿ ಸಾಗುತ್ತಿದೆ. ಇದು ತೈಲ ವಿತರಕ ಕಂಪನಿಗಳಿಗೆ ಶುಭ ಸೂಚನೆಯಾಗಿದೆ.
ಐಸಿಐಸಿಐ ಡೈರೆಕ್ಟ್ ಸಂಶೋಧನಾ ವರದಿಯ ಪ್ರಕಾರ, ಏಪ್ರಿಲ್ನಲ್ಲಿ ಮಾರಾಟವು ಶೇ 45ರಷ್ಟು ಕಡಿಮೆಯಾಗಿತ್ತು. ಬಹುತೇಕ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು, ಮುಖ್ಯವಾಗಿ ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಸ್ಥ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಾಕಷ್ಟು ನಷ್ಟ ಅನುಭವಿಸಿತ್ತು. ಅನ್ಲಾಕ್ನಿಂದಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ.