ನ್ಯೂಯಾರ್ಕ್:ಬ್ಯಾರೆಲ್ ಕಚ್ಚಾ ತೈಲದ ಬೆಲೆ ಒಂದು ಪಿಜ್ಜಾಗಿಂತಲೂ ಕಡಿಮೆಯಾಗಿರುವುದರಿಂದ ಕಚ್ಚಾ ತೈಲೋತ್ಪಾದಕ ಕಂಪನಿಗಳು ಭಾರಿ ನಷ್ಟದತ್ತ ಸಾಗುತ್ತಿವೆ. ತೈಲೋದ್ಯಮದ ಈ ಸಂಕಷ್ಟ ಎಂದಿಗೆ ಮುಗಿಯಲಿದೆ ಎಂಬ ಬಗ್ಗೆ ಆರ್ಥಿಕ ವಿಶ್ಲೇಷಕರು ಸಹ ತಲೆಕೆಡಿಸಿಕೊಂಡಿದ್ದಾರೆ.
ಮಂಗಳವಾರ ಮುಕ್ತಾಯಗೊಂಡ ವ್ಯವಹಾರದಲ್ಲಿ ಯುಎಸ್ ಬೆಂಚ್ಮಾರ್ಕ್ ಕಚ್ಚಾತೈಲ ಬೆಲೆ ಬ್ಯಾರೆಲ್ ಒಂದಕ್ಕೆ 12.34 ಯುಎಸ್ ಡಾಲರ್ನಲ್ಲಿ ಕೊನೆಗೊಂಡವು. ಪ್ರಸಕ್ತ ವರ್ಷಾರಂಭದಲ್ಲಿ ಒಂದು ಬ್ಯಾರೆಲ್ ತೈಲ ಬೆಲೆ 60 ಡಾಲರ್ನಷ್ಟಿತ್ತು. ಕೋವಿಡ್ ಕಾಯಿಲೆಯ ಕಾರಣದಿಂದ ವಿಶ್ವಾದ್ಯಂತ ಲಾಕ್ಡೌನ್ ವಿಧಿಸಲಾಗಿದ್ದು, ಜನರೆಲ್ಲ ಮನೆಗಳಲ್ಲೇ ಇರುವಂತಾಗಿದೆ. ಸಹಜವಾಗಿಯೇ ಸಂಚಾರಕ್ಕೆ ಯಾರೂ ವಾಹನ ಬಳಸುತ್ತಿಲ್ಲವಾದ್ದರಿಂದ ಪೆಟ್ರೋಲ್, ಡೀಸೆಲ್ ಬಳಕೆ ಗಣನೀಯವಾಗಿ ಕುಸಿದಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸಹ ಸಂಪೂರ್ಣ ರದ್ದಾಗಿದ್ದರಿಂದ ಏವಿಯೇಷನ್ ಫ್ಯೂಯೆಲ್ ಸಹ ಯಾರೂ ಕೇಳುವವರಿಲ್ಲದಂತಾಗಿದೆ.
ನಿಜ ಹೇಳಬೇಕೆಂದರೆ ಕೊರೊನಾ ಬರುವ ಮುಂಚಿನಿಂದಲೇ ತೈಲ ಬೆಲೆ ಕುಸಿತ ಆರಂಭವಾಗಿತ್ತು. ಅಗತ್ಯಕ್ಕಿಂತ ಹೆಚ್ಚು ತೈಲ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗೆ ಸತತವಾಗಿ ಪೂರೈಕೆ ಮಾಡಿದ್ದರಿಂದ ಬೆಲೆಗಳು ಆಗಲೇ ಕುಸಿಯಲಾರಂಭಿಸಿದ್ದವು. ಈಗ ತೈಲಕ್ಕೆ ಬೇಡಿಕೆಯೇ ಇಲ್ಲದಂತಾಗಿ ಉತ್ಪಾದಿಸಿದ ತೈಲವನ್ನು ಎಲ್ಲಿ ಸಂಗ್ರಹಿಸುವುದು ಎಂಬ ಪ್ರಶ್ನೆ ಉತ್ಪಾದಕರಲ್ಲಿ ಮೂಡಿದೆ. ತೈಲ ಬೇಡಿಕೆಯಲ್ಲಿ ಸತತ ಕುಸಿತದಿಂದಾಗಿ ಹಲವಾರು ಕಂಪನಿಗಳು ಇದ್ದ ತೈಲ ಬಾವಿಗಳನ್ನು ಮುಚ್ಚಲು ಮುಂದಾಗಿವೆ. ಆದರೆ, ಈ ಕ್ರಮದಿಂದ ಭವಿಷ್ಯದಲ್ಲಿ ಒಟ್ಟಾರೆ ತೈಲೋತ್ಪಾದನೆಯ ಮೇಲೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆಯಿದೆ.
ತೈಲ ಮಾರುಕಟ್ಟೆಗೆ ಮತ್ತೆ ಮೊದಲಿನ ಹೊಳಪು ಯಾವಾಗ ಬರಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಅಮೆರಿಕೆಯ ತೈಲ ಮಾರುಕಟ್ಟೆಗೆ ಮಾತ್ರ ಸುಧಾರಿಸಿಕೊಳ್ಳಲಾಗದ ಹೊಡೆತ ಬಿದ್ದಿರುವುದು ಮಾತ್ರ ನಿಜ. ಸದ್ಯ ತೈಲ ಬೆಲೆಗಳು ಅತಿ ಕಡಿಮೆಯಾಗಿರುವುದರಿಂದ ಹೊಸ ಬಾವಿಗಳನ್ನು ತೋಡುವುದು ಲಾಭದಾಯಕವಾಗಿಲ್ಲ. ಇನ್ನು ಈಗಿರುವ ಬಾವಿಗಳಿಂದ ತೈಲ ಹೊರತೆಗೆಯದಿದ್ದಲ್ಲಿ ಅವುಗಳಲ್ಲಿನ ತೈಲ ಪ್ರಮಾಣ ಕುಸಿಯುತ್ತ ಹೋಗುತ್ತದೆ. ಇದನ್ನು ನೋಡಿದರೆ ವಿಶ್ವಕ್ಕೆ ದೀರ್ಘಾವಧಿಯಲ್ಲಿ ತೈಲ ಕೊರತೆ ಕಾಡುವ ಸಂಭವ ಇಲ್ಲದಿಲ್ಲ.
ವಿಭಿನ್ನ-ವ್ಯಾಪಾರಗಳಲ್ಲಿ ತೊಡಗಿಕೊಂಡಿರುವ ಎಕ್ಸಾನ್ ರೀತಿಯ ತೈಲ ಕಂಪನಿಗಳು ಹೇಗೋ ಬದುಕುಳಿಯಬಹುದು. ಆದರೆ, ಸಣ್ಣ ಕಂಪನಿಗಳಿಗೆ ಈ ಸಮಯ ಅತಿ ಕೆಟ್ಟದಾಗಿದೆ. ನಷ್ಟದಲ್ಲಿರುವ ಸಣ್ಣ ತೈಲೋದ್ಯಮಗಳನ್ನು ದೊಡ್ಡ ಕಂಪನಿಗಳು ಖರೀದಿಸುವ ಎಲ್ಲ ಸಾಧ್ಯತೆಗಳಿವೆ. ಸಾಕಷ್ಟು ತೈಲೋತ್ಪಾದಕ ಕಂಪನಿಗಳು ಶೀಘ್ರದಲ್ಲೇ ದಿವಾಳಿಯಾಗುವ ಸಂಭವಗಳಿವೆ.