ಕರ್ನಾಟಕ

karnataka

ETV Bharat / business

Cryptocurrency-Bitcoin: ಏನಿದು ಕ್ರಿಪ್ಟೋಕರೆನ್ಸಿ? ಭಾರತದಲ್ಲಿ ಬಿಟ್ ಕಾಯಿನ್ ವ್ಯವಹಾರ ಹೇಗಿದೆ? - ಡಿಜಿಟಲ್​ ಕರೆನ್ಸಿ

ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Karnataka Bitcoin scam) ಸದ್ದು ಮಾಡುತ್ತಿದ್ದು, ದಿನದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Sri Krishna Alias Sriki) ಈ ಹಗರಣದ ಪ್ರಮುಖ ಆರೋಪಿಯಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ಕಾಂಗ್ರೆಸ್​-ಬಿಜೆಪಿ ಆರೋಪ-ಪ್ರತ್ಯಾರೋಪಗಳ ನಡುವೆ ಪ್ರಕರಣದ ತನಿಖೆ ಮುಂದುವರೆದಿದೆ. ಕ್ರಿಪ್ಟೋಕರೆನ್ಸಿ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ..

Cryptocurrency-Bitcoin
Cryptocurrency-Bitcoin

By

Published : Nov 13, 2021, 10:39 AM IST

Updated : Nov 13, 2021, 3:21 PM IST

ಈಗ ಜಗತ್ತು ಎಲ್ಲ ಇಂಟರ್​ನೆಟ್​ಮಯ.. ಎಲ್ಲವೂ ಈಗ ಅಂಗೈನಲ್ಲೇ ಸಿಗುತ್ತವೆ.. ನೆನೆದವರ ಮನದಲ್ಲಿ ಎಂಬಂತೆ ನೆನಪಿಸಿಕೊಳ್ಳುತ್ತಲೇ ಎಲ್ಲವೂ ಸಿಗುವಂತಾಗಿದೆ. ಈ ಮಾತಿಗೆ ಇಂಬು ನೀಡುವಂತೆ ಈಗ ಗರಿ ಗರಿ ನೋಟು ಎಣಿಸಬೇಕಿಲ್ಲ. ಅವುಗಳನ್ನು ಕೈಯಲ್ಲಿ ಮುಟ್ಟದೇ ಡಿಜಿಟಲ್​ ರೂಪದಲ್ಲೇ ಕಾಪಿಟ್ಟು ವ್ಯವಹಾರ ನಡೆಸಬಹುದು.

ಅದಕ್ಕಾಗಿಯೇ ಸೃಷ್ಟಿಯಾಗಿರುವ ಕರೆನ್ಸಿ ಎಂದರೆ ಅದು ಡಿಜಿಟಲ್​ ಕರೆನ್ಸಿ (Digital Currency).. ಅದಕ್ಕೆ ಸ್ಪಷ್ಟ ಉದಾಹರಣೆ ಕ್ರಿಪ್ಟೋಕರೆನ್ಸಿ (Cryptocurrency). ಕ್ರಿಪ್ಟೋಕರೆನ್ಸಿ ಆಧುನಿಕ ಯುಗದ ಮುದ್ರಣ ರೂಪ ಇಲ್ಲದ ಡಿಜಿಟಲ್ ಕರೆನ್ಸಿಯಾಗಿದೆ. ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮೊಬೈಲ್ ಆ್ಯಪ್, ಕಂಪ್ಯೂಟರ್ ಮೂಲಕ ಸುಲಭವಾಗಿ ಚಲಾವಣೆ ಮಾಡಬಹುದಾಗಿದೆ.

ಕ್ರಿಪ್ಟ್ರೋಕರೆನ್ಸಿ ಮೂಲಕ ಸುಲಭವಾಗಿ ರೂಪಾಯಿ, ಡಾಲರ್, ಯೂರೋಗಳಂತೆಯೇ ವಸ್ತುಗಳನ್ನು ಖರೀದಿಸಬಹುದು ಮತ್ತು ಸೇವೆ ಪಡೆಯಬಹುದಾಗಿದೆ. ಇದು ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದರ ಹಂಗಿಲ್ಲದೇ ವ್ಯವಹರಿಸುವ ವಿಧಾನವಾಗಿದೆ.

ಅಷ್ಟಕ್ಕೂ ಕ್ರಿಪ್ಟೋಕರೆನ್ಸಿ ಎಂದರೇನು?

ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ, ಕೈಯಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ.

ಇನ್ನೊಂದು ಬಗೆಯಲ್ಲಿ ಹೇಳಬೇಕು ಎಂದರೆ, ​​‘ಬ್ಲಾಕ್‌ ಚೈನ್’ (Blockchain) ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಇವು ಕೆಲಸ ಮಾಡುತ್ತವೆ. ​​ಬ್ಲಾಕ್‌ ಚೈನ್ ಎನ್ನುವುದು ವಿಕೇಂದ್ರೀಕೃತ ತಂತ್ರಜ್ಞಾನವಾಗಿದ್ದು, ಇದು ಅನೇಕ ಕಂಪ್ಯೂಟರ್‌ಗಳಲ್ಲಿ ಹರಡಿ ವ್ಯವಹಾರಗಳನ್ನು ನಿರ್ವಹಿಸುತ್ತದೆ ಮತ್ತು ದಾಖಲಿಸುತ್ತದೆ. ಸುರಕ್ಷತೆಯೇ ಈ ತಂತ್ರಜ್ಞಾನದ ಮೊದಲ ಆದ್ಯತೆ. ಇದುವೇ ಅದರ ವೈಶಿಷ್ಠ್ಯತೆ.

ಇದನ್ನೂ ಓದಿ: Bitcoin Scam : 'ತನಿಖಾವಧಿಯಲ್ಲಿ ನನ್ನ ಮಗನಿಗೆ ಡ್ರಗ್ಸ್​ ನೀಡಿದ್ದಾರೆ'.. ಪೊಲೀಸರ ವಿರುದ್ಧ 'ಶ್ರೀಕಿ' ತಂದೆ ಆರೋಪ

ಹೌದು, ​​‘ಬ್ಲಾಕ್‌ ಚೈನ್’ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸೋದಿಲ್ಲ ಹಾಗೂ ಭಾಗಿಯಾಗುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಯಾವುದು ಕ್ರಿಪ್ಟೋಕರೆನ್ಸಿ?

ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್ (Bitcoin). ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋ ಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ.

2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ವಿಶ್ವಕ್ಕೆ ಪರಿಚಯಿಸಿತು. ಇದೀಗ ಅಕ್ಟೋಬರ್​ 2021ರ ಅಂಕಿ ಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 20 ದಶಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್​​​ಗೂ ಹೆಚ್ಚು.

ಬಿಟ್‌ ಕಾಯಿನ್ ಮಾತ್ರವಲ್ಲ ಇನ್ನೂ ಹಲವು ಕ್ರಿಪ್ಟೋ ಕರೆನ್ಸಿ ವಿತರಣಾ ಕಂಪನಿಗಳು ಈಗೀಗ ಹೆಚ್ಚು ಜನಪ್ರಿಯವಾಗಿವೆ. ಆಲ್ಟ್‌ ಕಾಯಿನ್, ಲೈಟ್ ಕಾಯಿನ್, ಪೀರ್ ಕಾಯಿನ್, ನೇಮ್ ಕಾಯಿನ್ ಹೀಗೆ ಹಲವು ಕಂಪನಿಗಳಿವೆ. ವಿಶ್ವದಲ್ಲಿ ಒಟ್ಟು 1.5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಇದ್ದು, ಈ ಪೈಕಿ ಶೇ. 60ರಷ್ಟು ಬಿಟ್‌ ಕಾಯಿನ್‌ಗಳೇ ಆಗಿವೆ.

ಕ್ರಿಪ್ಟೋಕರೆನ್ಸಿಯ ಪ್ರಮುಖ ವಿಧಗಳು:

* ಬಿಟ್‌ ಕಾಯಿನ್

* ಎಥೆರಿಯಮ್

* ಎಕ್ಸ್ಆರ್‌ಪಿ

* ಟೆದರ್

* ಡಾಗ್ ಕಾಯಿನ್

* ಬಿಟ್‌ ಕಾಯಿನ್‌ ಕ್ಯಾಶ್‌

ಇದನ್ನೂ ಓದಿ: ಬಿಟ್ ಕಾಯಿನ್ ಜಟಾಪಟಿ.. ಸಿಎಂ ಹುದ್ದೆಗೆ ಕುತ್ತು ಎಂಬುದೆಲ್ಲಾ ರಾಜಕೀಯ ಪ್ರೇರಿತ : ಬೊಮ್ಮಾಯಿ

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ

ಹಲವು ಬಗೆಯ ಕ್ರಿಪ್ಟೋ ಕರೆನ್ಸಿಗಳಿವೆ. ಆದರೆ ಬಿಟ್ ಕಾಯಿನ್ ಹೆಚ್ಚು ಜನಪ್ರಿಯ ಹಾಗೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕರೆನ್ಸಿ. ಇತ್ತೀಚಿಗೆ ಪ್ರಮುಖ ಐದು ಕ್ರಿಪ್ಟೋ ಕರೆನ್ಸಿಗಳ ಲಿಸ್ಟ್‌ನಲ್ಲಿ ಡಾಗ್ ಕಾಯಿನ್ ಕಾಣಿಸಿಕೊಂಡಿದೆ. ಈ ಡಾಗ್ ಕಾಯಿನ್ 2013ರಲ್ಲಿ ಪರಿಚಯಿಸಲಾಗಿದೆ.

ಕ್ರಿಪ್ಟೋಕರೆನ್ಸಿ ಮಾನ್ಯತೆ

ಅನೇಕ ದೇಶಗಳು ಕ್ರಿಪ್ಟೋ ಕರೆನ್ಸಿಯನ್ನು ಬೆಂಬಲಿಸಲು ಪ್ರಾರಂಭಿಸಿವೆ. ಆದರೆ, ಅನೇಕ ಸಂದರ್ಭಗಳಲ್ಲಿ, ಕ್ರಿಪ್ಟೋ ಕರೆನ್ಸಿಗಳ ಸುತ್ತ ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಭಾರತದಲ್ಲಿ, ಆರಂಭದಲ್ಲಿ ಕ್ರಿಪ್ಟೋ ಕರೆನ್ಸಿ ನಿಷೇಧದ ಕುರಿತು ಮಾತುಕತೆ ನಡೆದಿತ್ತು. RBIಮತ್ತು SEBIಎರಡೂ ಸಂಸ್ಥೆಗಳು ಕ್ರಿಪ್ಟೋಕರೆನ್ಸಿಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದಕ್ಕಾಗಿ ಎಸ್​ಬಿಐ ಮತ್ತು ಸೆಬಿ ಸೇರಿಕೊಂಡು ಕ್ರಿಪ್ಟೋಕರೆನ್ಸಿಗೆ ನಿಯಮಗಳನ್ನು ಸಿದ್ಧಪಡಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಕ್ರಿಪ್ಟೋಕರೆನ್ಸಿಯ ಮೇಲಿನ ಜವಾಬ್ದಾರಿಯನ್ನು ಈ ಎರಡು ಸಂಸ್ಥೆಗಳಿಗೆ ನೀಡಲು ಯೋಚನೆ ಮಾಡಿದೆ ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿಯ ಕಾನೂನು ಅಂಶಗಳು

ಕ್ರಿಪ್ಟೋಕರೆನ್ಸಿ ಕಾನೂನು ಬದ್ಧವಾದ ಹಣವಲ್ಲ. ಇದನ್ನು ಕೇಂದ್ರ ಸರ್ಕಾರ ಅಥವಾ ಬ್ಯಾಂಕ್ ಬೆಂಬಲಿಸುವುದಿಲ್ಲ. ಇದು ವಿಕೇಂದ್ರೀಕೃತ ಮತ್ತು ಜಾಗತಿಕವಾದ ವ್ಯವಹಾರ ಒಂದು ಕ್ರಮವಾಗಿದೆ. ಇದರ ರೂಪ ಡಿಜಿಟಲ್ ಬ್ಯಾಂಕ್ ಕ್ರೆಡಿಟ್ ಸಾನ್ಸ್ ಬ್ಯಾಂಕಿನಂತಿದೆ. ಆದರೆ, ಬ್ಯಾಂಕ್ ಅಥವಾ ಸರ್ಕಾರದಿಂದ ಈ ಕರೆನ್ಸಿ ಬೆಂಬಲಿತವಾಗಿಲ್ಲ. ಅಲ್ಗಾರಿದಮ್ ಸರಬರಾಜನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ತೆರಿಗೆಗಳನ್ನು ಕ್ರಿಪ್ಟೋಕರೆನ್ಸಿ ಮೂಲಕ ಪಾವತಿಸಲು ಸಾಧ್ಯವಿಲ್ಲ. ಬದಲಿಗೆ ನೀವು ಅದರ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ಕ್ರಿಪ್ಟೋಕರೆನ್ಸಿ ಮತ್ತು ಭಾರತ

ಡಿಸೆಂಬರ್ 2013 ರಲ್ಲಿ, ಆರ್​​​​ಬಿಐ ವರ್ಚುಯಲ್ ಕರೆನ್ಸಿಗಳ ಅಪಾಯಗಳ ಬಗ್ಗೆ ಬಳಕೆದಾರರಿಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿತ್ತು. ಅಷ್ಟೇ ಅಲ್ಲ ಅದರ ಮೌಲ್ಯವು ಊಹಾಪೋಹಗಳ ವಿಷಯವಾಗಿದೆ ಮತ್ತು ಅದು ಆಸ್ತಿ ಅಥವಾ ಇತರ ಒಳ್ಳೆಯ ವಿಷಯಗಳಿಂದ ಬೆಂಬಲಿತವಾಗಿಲ್ಲ ಎಂದು ಆರ್​​​ಬಿಐ ಹೇಳಿದೆ.

ಏಪ್ರಿಲ್ 6, 2018 ರಂದು, ಆರ್‌ಬಿಐ ಕ್ರಿಪ್ಟೋ - ಸಂಸ್ಥೆಗಳು ಮತ್ತು ವರ್ಚುಯಲ್ ಕರೆನ್ಸಿಗಳೊಂದಿಗೆ ವ್ಯವಹರಿಸುವುದನ್ನು ನಿರ್ಬಂಧಿಸಿತ್ತು. ಭಾರತ ಸರ್ಕಾರವೂ ಬಜೆಟ್​​​ನಲ್ಲೇ ಇದು ಕಾನೂನು ಬದ್ಧ ವ್ಯವಹಾರ ಅಲ್ಲ ಎಂದು ಅಧಿಕೃತವಾಗಿ ಘೋಷಿಸಿತ್ತು ಕೂಡಾ.

ಫೆಬ್ರವರಿ 28, 2019 ರಂದು, ವರ್ಚುಯಲ್ - ಕರೆನ್ಸಿಗಳ ಹಣಕಾಸು ಸಚಿವಾಲಯ ಸಮಿತಿಯು ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಶಿಫಾರಸು ಮಾಡಿತ್ತು. ಅಷ್ಟೇ ಅಲ್ಲ ಭಾರತವೇ ಇಂತಹದ್ದೊಂದು ಡಿಜಿಟಲ್​ ರೂಪದ ಹಣ ಬಿಡುಗಡೆಗೂ ಯೋಜಿಸಿದ್ದು, ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಲಾಗಿದೆ.

ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡಿದರೆ ಈ ಶಿಕ್ಷೆ

ದೇಶದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡುವಂತಿಲ್ಲ. ಹಾಗೊಂದು ವೇಳೆ ಇಂತಹ ವ್ಯವಹಾರ ಕಂಡು ಬಂದಿದ್ದು ಸಾಬೀತಾದರೆ 25 ಕೋಟಿ ರೂ.ಗಳವರೆಗೆ ದಂಡ ಅಥವಾ ಒಂದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿತ್ತು.

ಆರ್​​​​​​ಬಿಐ (RBI) ನಿಷೇಧ ತೆರವುಗೊಳಿಸಿದ ಸುಪ್ರೀಂಕೋರ್ಟ್​ (Supreme Court)

ಆದರೆ, ಮಾರ್ಚ್ 2020 ರಲ್ಲಿ, ಕೇಂದ್ರ ಬ್ಯಾಂಕ್, ಕ್ರಿಪ್ಟೋಕರೆನ್ಸಿ ನಿಷೇಧವನ್ನ ಸುಪ್ರೀಂಕೋರ್ಟ್​ ರದ್ದುಗೊಳಿಸಿದೆ. ವಿನಿಮಯ ಕೇಂದ್ರಗಳು ಮತ್ತು ವ್ಯಾಪಾರಿಗಳಿಂದ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ನಿರ್ವಹಿಸಲು ಸುಪ್ರೀಂ ಬ್ಯಾಂಕುಗಳಿಗೆ ಅವಕಾಶ ನೀಡಿದೆ.

ಭಾರತದಲ್ಲಿ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಕಾನೂನುಬದ್ಧವೇ?

ಭಾರತದಲ್ಲಿ ಬಿಟ್‌ಕಾಯಿನ್‌ ಮೇಲೆ ಹೂಡಿಕೆ ಮಾಡುವುದು ನಿಷೇಧಿತವಲ್ಲ. ಇದನ್ನು ಯಾವುದೇ ಕೇಂದ್ರ ಪ್ರಾಧಿಕಾರ ನಿಯಂತ್ರಿಸುವುದಿಲ್ಲ. ಭಾರತದ ಸುಪ್ರೀಂಕೋರ್ಟ್ 2019ರ ಫೆಬ್ರವರಿ 25ರ ತನ್ನ ತೀರ್ಪಿನಲ್ಲಿ, ಶೀಘ್ರದಲ್ಲೇ 'ಕ್ರಿಪ್ಟೋಕರೆನ್ಸಿ ನಿಯಂತ್ರಣ ನೀತಿ'ಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಅಂದಿನಿಂದ ಇಂದಿನ ತನಕ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಭಾರತದಲ್ಲಿ ಬಿಟ್‌ಕಾಯಿನ್‌ಗಳನ್ನು ಎಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು?

ವಾಜಿರ್ ಎಕ್ಸ್, ಕಾಯಿನ್ ಸ್ವಿಚ್, ಜೆಬ್‌ಪೇ, ಕಾಯಿನ್ ಡಿಎಕ್ಸ್‌ (Wazir X, CoinSwitch, ZebPay, CoinDcx) ಪ್ಲಾಟ್ಫಾರ್ಮ್ನಂತಹ ವಿನಿಮಯ ಕೇಂದ್ರಗಳಲ್ಲಿ ಬಿಟ್‌ಕಾಯಿನ್‌ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದ ಟ್ರೇಡಿಂಗ್ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ಮತ್ತು ಮಾರಾಟ ಮಾಡಬಹುದು.

ಬಿಟ್​ಕಾಯಿನ್​ ನಿಯಮಗಳು ಸರ್ಕಾರದಿಂದ ನಿಯಂತ್ರಿತವಾಗುತ್ತವೆಯೇ?

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಪ್ರಸ್ತುತ ಸ್ವಯಂ ನಿಯಂತ್ರಕ ಸಂಸ್ಥೆ (SRO) ಚೌಕಟ್ಟಿನಡಿ ನಡೆಯುತ್ತಿವೆ. ಯಾವುದೇ ಸರ್ಕಾರಿ ನಿಯಂತ್ರಕ ಚೌಕಟ್ಟಿನ ವ್ಯಾಪ್ತಿಗೆ ಬರುವುದಿಲ್ಲ. ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ.

ಬಿಟ್‌ಕಾಯಿನ್ ಟ್ರೇಡಿಂಗ್ ಖಾತೆ ತೆರೆಯಲು ಯಾವ ದಾಖಲೆ ಒದಗಿಸಬೇಕು?

ಕಾನೂನುಬದ್ಧ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್‌ ಖರೀದಿ ಮತ್ತು ಮಾರಾಟ ಮಾಡಲು ಗ್ರಾಹಕರು ತಮ್ಮ ಕೆವೈಸಿ ವಿವರ, ಬ್ಯಾಂಕ್ ಖಾತೆ ಮತ್ತು ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆ ನೀಡುವಂತೆ ಕೇಳುತ್ತವೆ. ಕೆವೈಸಿ ಪರಿಶೀಲನೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಮೂಲಕ ಸ್ವೀಕರಿಸಲಾಗುತ್ತದೆ. ಹಣವನ್ನು ನೋಂದಾಯಿತ ಬ್ಯಾಂಕ್ ಖಾತೆಗೆ ಮತ್ತು ಬೇರೆ ಯಾವುದೇ ಮೂಲದಿಂದ ವರ್ಗಾಯಿಸಬಹುದು.

ಭಾರತದಲ್ಲಿ ಬಿಟ್‌ಕಾಯಿನ್ ಹೂಡಿಕೆಯಿಂದ ಲಾಭಪಡೆಯುವುದು ಹೇಗೆ?

ಹೂಡಿಕೆದಾರರು ಬಿಟ್‌ಕಾಯಿನ್‌ ಖರೀದಿಸಿ ಮಾರಾಟ ಮಾಡಿದರ ಮೇಲೆ ಗಳಿಸಿದ ಲಾಭದ ಬಂಡವಾಳಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ವ್ಯಾಪಾರಿ ಆಗಿದ್ದರೆ ಲಾಭವು ನಿಮ್ಮ ವ್ಯವಹಾರದ ಆದಾಯದ ಒಂದು ಭಾಗವಾಗುತ್ತದೆ. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.

ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು ತೆರಿಗೆ ಅಧಿಕಾರಿಗಳ ಜತೆ ಮಾಹಿತಿ ಹಂಚಿಕೊಳ್ಳುತ್ತವೆಯೇ?

ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು ಎಲ್ಲಾ ಖರೀದಿ ಮತ್ತು ಮಾರಾಟ ಚಟುವಟಿಕೆ ಒಳಗೊಂಡು ಗ್ರಾಹಕರ ದಾಖಲೆಗಳನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿದೆ. ಈ ಮಾಹಿತಿಯನ್ನು ತೆರಿಗೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು. ಇದರರ್ಥ ಆದಾಯ ತೆರಿಗೆ ಇಲಾಖೆಯು ದೇಶದಲ್ಲಿ ಬಿಟ್‌ಕಾಯಿನ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವವರ ಮಾಹಿತಿ ಪಡೆಯುತ್ತದೆ.

ಬಿಟ್‌ಕಾಯಿನ್ ಮೌಲ್ಯ ಏಕೆ ಏರಿಕೆಯಾಗಿದೆ?

ಕಳೆದ 10 ವರ್ಷಗಳಲ್ಲಿ ಬಿಟ್‌ಕಾಯಿನ್ ಅತ್ಯುತ್ತಮ ಆದಾಯದ ಒಂದು ಮಾರ್ಗವಾಗಿದೆ, ಇದನ್ನು ಈಗ ಒಂದು ನಿರ್ದಿಷ್ಟ ವರ್ಗದ ಹೂಡಿಕೆದಾರರು ಹಣದುಬ್ಬರದ ಹೆಡ್ಜ್ ಆಗಿ ನೋಡುತ್ತಿದ್ದಾರೆ. ಬಹಳಷ್ಟು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸಲು ಕ್ರಿಪ್ಟೋ ಕರೆನ್ಸಿಗಳತ್ತ ಮುಖ ಮಾಡುತ್ತಿವೆ. ಹೀಗಾಗಿ ಬಿಟ್​ ಕಾಯಿನ್​ ಬೆಲೆ ಗಗನಕ್ಕೇರಿದೆ, ಇತ್ತೀಚಿನ ವರದಿ ಪ್ರಕಾರ ಒಂದು ಬಿಟ್​ ಕಾಯಿನ್​ ಬೆಲೆ 65 ಸಾವಿರ ಡಾಲರ್​​​ಗೆ ಏರಿಕೆ ಆಗಿದೆ.

ಬಿಟ್‌ಕಾಯಿನ್ ಮೌಲ್ಯ ಏಕೆ ಅಸ್ಥಿರವಾಗಿದೆ?

ಇತರ ಯಾವುದೇ ಆಸ್ತಿಗೆ ಹೋಲಿಸಿದರೆ ಬಿಟ್‌ಕಾಯಿನ್ ಬಹಳ ಏರಿಳಿತದ ವ್ಯಾಪಾರ ಮಾರುಕಟ್ಟೆಯಾಗಿದೆ. ಇದು ಸದಾ ಚಂಚಲತೆಯಿಂದ ವಹಿವಾಟು ನಡೆಸುತ್ತದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸ್ಟಾಕ್‌ಗಳು ದೊಡ್ಡ ಕ್ಯಾಪ್ ಸ್ಟಾಕ್‌ಗಳಿಗಿಂತ ಹೆಚ್ಚು ಹೊಯ್ದಾಟದ ವಹಿವಾಟಾಗಿದೆ.

ಅಂತಿಮ ಮಾತು..

ಈಗಾಗಲೇ ಎಲ್ಲವೂ ಡಿಜಿಟಲ್​ಮಯ ಆಗಿವೆ. ಇನ್ಮುಂದೆ ನಗದು ವ್ಯವಹಾರ ಕಣ್ಮರೆ ಆಗಬಹುದು. ಎಲ್ಲವೂ ಡಿಜಿಟಲ್​ಮಯ ಆಗುವ ಕಾಲ ಬಹುದೂರವಿಲ್ಲ. ದೇಶದಲ್ಲಿ ನಮ್ಮದೇ ಆದ ಡಿಜಿಟಲ್​ ಮನಿ ಆರಂಭವಾದರೆ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಕಾನೂನು ಬದ್ಧ ವ್ಯವಹಾರವಾಗಿ ಜಾರಿಗೆ ಬರಬಹುದು. ಆದರೂ ಇದರಿಂದ ಎಷ್ಟು ಒಳ್ಳೆಯದಿದೆಯೋ ಅಷ್ಟೇ ಕೆಟ್ಟ ಪರಿಣಾಮವೂ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸಬೇಕಿದೆ. ಅಂತರ್ಜಾಲ ಕಳ್ಳರು ಮತ್ತು ಸೈಬರ್​ ಖದೀಮರಿಂದ ಎಚ್ಚರಿಕೆಯಿಂದ ಇರುವುದು ಉತ್ತಮ

Last Updated : Nov 13, 2021, 3:21 PM IST

ABOUT THE AUTHOR

...view details