ನ್ಯೂಯಾರ್ಕ್: ಭಾರತವು ತನ್ನದೇ ನಾಗರಿಕರಿಗೆ ಲಸಿಕೆ ನೀಡುವುದಕ್ಕಿಂತ ಜಾಗತಿಕವಾಗಿ ಹೆಚ್ಚು ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ ಎಂದು ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
ಲಸಿಕೆಗಳ ಅಸಮಾನತೆಯು ಕೊರೊನಾ ವೈರಸ್ ನಿರ್ಮೂಲನೆಯ ಸಾಮೂಹಿಕ ಜಾಗತಿಕ ಸಂಕಲ್ಪವನ್ನು ಸೋಲಿಸುತ್ತದೆ. ಲಸಿಕೆಗಳ ಲಭ್ಯತೆಯಲ್ಲಿನ ಅಸಮಾನತೆಯು ಬಡ ರಾಷ್ಟ್ರಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಭಾರತ ಎಚ್ಚರಿಸಿದೆ.
180ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲವನ್ನು ಗಳಿಸಿದ 'ಕೋವಿಡ್-19 ಲಸಿಕೆಗಳಿಗೆ ಸಮಾನ ಜಾಗತಿಕ ಪ್ರವೇಶದ ರಾಜಕೀಯ ಘೋಷಣೆ'ಯ ಪ್ರಾರಂಭಿಕರಲ್ಲಿ ಭಾರತವೇ ಮೊದಲ ರಾಷ್ಟ್ರವಾಗಿದೆ ಎಂದು ಭಾರತದ ಯುಎನ್ ರಾಯಭಾರಿ ಡೆಪ್ಯುಟಿ ಖಾಯಂ ಪ್ರತಿನಿಧಿ ಕೆ. ನಾಗರಾಜ್ ನಾಯ್ಡು ಅವರು ಸಾಮಾನ್ಯ ಸಭೆಯ ಅನೌಪಚಾರಿಕ ಸಮಾವೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪ್ಯಾಕೇಜ್ಡ್ ಕುಡಿಯುವ ನೀರಿಗೆ ಬಿಐಎಸ್ ಮಾರ್ಕ್ ಕಡ್ಡಾಯ
ಲಸಿಕೆ ಸವಾಲನ್ನು ಪರಿಹರಿಸಲಾಗಿದ್ದರೂ ನಾವು ಈಗ ಕೋವಿಡ್-19 ಲಸಿಕೆಗಳ ಲಭ್ಯತೆ, ಪ್ರವೇಶ, ಕೈಗೆಟುಕುವ ದರ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಜಾಗತಿಕ ಸಹಕಾರದ ಕೊರತೆ ಮತ್ತು ಲಸಿಕೆಗಳ ಪ್ರವೇಶದಲ್ಲಿ ಅಸಮಾನತೆಯು ಬಡ ರಾಷ್ಟ್ರಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದರು.
ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮುಂದಿನ ಆರು ತಿಂಗಳಲ್ಲಿ ಭಾರತವು ತನ್ನದೇ ಆದ 300 ಮಿಲಿಯನ್ ಕಾರ್ಮಿಕರಿಗೆ ಲಸಿಕೆ ನೀಡಲಿದೆ. ಈ ಪ್ರಕ್ರಿಯೆಯಲ್ಲಿ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಿದೆ. ವಾಸ್ತವವಾಗಿ, ಈ ವೇಳೆಗಾಗಲೇ ನಾವು ನಮ್ಮ ನಾಗರಿಕರಿಗೆ ಲಸಿಕೆ ನೀಡಿದ್ದಕ್ಕಿಂತ ಹೆಚ್ಚಿನ ಲಸಿಕೆಗಳನ್ನು ಜಾಗತಿಕವಾಗಿ ಪೂರೈಸಿದ್ದೇವೆ ಎಂದು ನಾಯ್ಡು ಹೇಳಿದರು.